ಕೂಡಿಗೆ, ಅ. ೨೫: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆಯನ್ನೇ ಅವಲಂಬಿಸಿ ಮೆಕ್ಕೆಜೋಳ ಬೆಳೆದಿರುವ ನೂರಾರು ರೈತರು ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಕಟಾವಿನ ಹಂತಕ್ಕೆ ಬಂದಿರುವ ಮೆಕ್ಕೆಜೋಳದ ಬೆಳೆಯನ್ನು ಕೊಯ್ಲು ಮಾಡಿ ಮಾರಾಟ ಮಾಡಲು ಸಾಧ್ಯವಾಗದೆ ರೈತರು ಪರದಾಡುವಂತಾಗಿದೆ.

ತಾಲೂಕಿನ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩೦ಕ್ಕೂ ಹೆಚ್ಚು ಉಪಗ್ರಾಮಗಳಲ್ಲಿ ರೈತರು ಹಲವು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಕಡಿಮೆ ಪ್ರಮಾಣದ ಮಳೆಯ ನಡುವೆಯೂ ಬೆಳೆ ಉತ್ತಮವಾಗಿ ಬಂದಿದ್ದು, ಇದೀಗ ಕಟಾವಿನ ಹಂತ ತಲುಪಿದೆ. ಆದರೆ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆ ರೈತರ ನಿರೀಕ್ಷೆಗೆ ತಣ್ಣೀರೆರಚಿದೆ.

ಅನೇಕ ರೈತರು ಈಗಾಗಲೇ ಮೆಕ್ಕೆಜೋಳವನ್ನು ಕಟಾವು ಮಾಡಿ ಜಮೀನಿನಲ್ಲಿ ಒಂದೆಡೆ ರಾಶಿ ಹಾಕಿದ್ದಾರೆ. ಆದರೆ, ನಿರಂತರ ಮಳೆಯಿಂದಾಗಿ ಜೋಳವನ್ನು ಜಮೀನಿನಿಂದ ಸಾಗಿಸಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಯಿಂದ ತೇವಗೊಂಡಿರುವ ಮೆಕ್ಕೆಜೋಳದ ತೆನೆಗಳಲ್ಲಿ ಮೊಳಕೆ ಕಾಣಿಸಿಕೊಳ್ಳುತ್ತಿದ್ದು, ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ.

ಇದಲ್ಲದೆ, ತಾಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಮೀನುಗಳಿಗೆ ತೆರಳುವ ರಸ್ತೆಗಳು ಕೆಸರುಮಯವಾಗಿವೆ. ಪರಿಣಾಮವಾಗಿ ಮೆಕ್ಕೆಜೋಳ ಸಾಗಿಸುವ ವಾಹನಗಳು ಜಮೀನುಗಳಿಗೆ ತೆರಳಲು ಸಾಧ್ಯವಾಗದೆ ರೈತರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

ಕಟಾವು ಮಾಡಿದ ಬೆಳೆಯನ್ನು ಸಕಾಲದಲ್ಲಿ ಸಾಗಿಸಿ ಮಾರಾಟ ಮಾಡಲು ಸಾಧ್ಯವಾಗದಿರುವುದರಿಂದ ಮೆಕ್ಕೆಜೋಳ ಬೆಳೆಗಾರರು ಆರ್ಥಿಕ ನಷ್ಟದ ಭೀತಿಯಲ್ಲಿದ್ದಾರೆ.

- ನಾಗರಾಜಶೆಟ್ಟಿ