ಸೋಮವಾರಪೇಟೆ, ಅ. ೨೪: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ೧೯ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ವಿ. ಸಂಪತ್ ಕುಮಾರ್ ತಿಳಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನ. ೧ ರಂದು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸುವ ಭವ್ಯ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ದಿನವಿಡೀ ನಡೆಯಲಿದೆ ಎಂದರು.
ಅAದು ಬೆಳಿಗ್ಗೆ ೭ ಗಂಟೆಗೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ, ೭.೩೦ಕ್ಕೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ೮.೩೦ಕ್ಕೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಆಟೋಗಳ ಮೆರವಣಿಗೆ ಹಾಗೂ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ, ೧೦ ಗಂಟೆಗೆ ಸಮಾರಂಭದ ಉದ್ಘಾಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸಮಾರಂಭವನ್ನು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸಚಿವ ಅಪ್ಪಚ್ಚು ರಂಜನ್, ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ್, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಗೌಡಳ್ಳಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಎಸ್.ಬಿ. ಭರತ್ಕುಮಾರ್, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಗ್ರಾ.ಪಂ. ಮಾಜಿ ಸದಸ್ಯ ಮಿಥುನ್ ಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು. ಬೆಳಿಗ್ಗೆ ೧೧ ಗಂಟೆಗೆ ಶಾಲಾ ಮಕ್ಕಳಿಗೆ ಕುಣಿಯೋಣು ಬಾರಾ ಕಾರ್ಯಕ್ರಮ, ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಸಂಜೆ ೪ ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ. ೬ ಗಂಟೆಗೆ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಉದ್ಯಮಿ ನಾಪಂಡ ಮುತ್ತಪ್ಪ ಹಾಗೂ ನಾಪಂಡ ಮುದ್ದಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಗುತ್ತಿಗೆದಾರ ಕೆ.ಟಿ. ಸತೀಶ್ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಎಸ್.ಐ. ಮಹಮ್ಮದ್ ಫೀರ್, ಸಿ.ಆರ್.ಪಿ.ಎಫ್.ನ ನಿವೃತ್ತ ಡೆಪ್ಯೂಟಿ ಕಮಾಂಡರ್ ಬಳಗುಂದ ಗ್ರಾಮದ ಬಿ.ಬಿ. ಮಂಜುನಾಥ್, ಹಾನಗಲ್ಲು ವೃತ್ತದ ಗ್ರಾಮ ಆಡಳಿತಾಧಿಕಾರಿ ಎನ್. ರಾಜು ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು ಎಂದು ಸಂಪತ್ಕುಮಾರ್ ತಿಳಿಸಿದರು. ನಂತರ ಸರಿಗಮಪ ಸ್ಪರ್ಧೆಯ ವಿಜೇತ ಗಾಯಕ ಸುನಿಲ್ ನೇತೃತ್ವದ ಸಿನಿಮಾ ಹಾಗೂ ಕಿರುತೆರೆ ಕಲಾವಿದರು, ಗಾಯಕರುಗಳನ್ನು ಒಳಗೊಂಡ ದಿ ಬ್ಯಾಂಡ್ ಎಕೋಸ್ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ಮೂಡಿಬರಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಯಡೂರು ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಕವನ್, ಸಹ ಕಾರ್ಯದರ್ಶಿ ಎ.ಸಿ. ಜಗದೀಶ್, ಖಜಾಂಚಿ ಐಗೂರು ವಿಜು, ಗೌರವಾಧ್ಯಕ್ಷ ಕೆ.ಪಿ. ರವೀಶ್, ಮಾಜಿ ಅಧ್ಯಕ್ಷ ಮೋಹನ್ ಅವರುಗಳು ಇದ್ದರು.