ಚೆಟ್ಟಳ್ಳಿ, ಅ. ೨೩: ಶ್ರೀಮಂಗಲ ಗ್ರಾಮದ ಕಾಫಿ ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ದನದ ಕಳೇಬರ ಪತ್ತೆಯಾಗಿದ್ದು, ಹುಲಿ ಅಥವಾ ಚಿರತೆ ದಾಳಿಯಿಂದ ದನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೀನುಕೊಲ್ಲಿ ಅರಣ್ಯ ವಿಭಾಗದ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಕರ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಮೀಪದ ತಂತಿ ಬೇಲಿಯಲ್ಲಿ ದೊರೆತಿರುವ ಕೂದಲನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಪ್ರಾಣಿ ಯಾವುದೆಂಬುದನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ತೋಟಗಳಲ್ಲಿ ಪ್ರಾಣಿಗಳ ಹೆಜ್ಜೆ ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹುಲಿ ಅಥವಾ ಚಿರತೆ ಸಂಚಾರದ ಶಂಕೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ತೋಟದ ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.
- ಕಾಳಯ್ಯ