ವಿಶೇಷ ವರದಿ : ಈಶಾನ್ವಿ

ವೀರಾಜಪೇಟೆ, ಅ. ೨೩: ಕರ್ನಾಟಕ - ಕೇರಳ ಗಡಿಭಾಗದ ದಟ್ಟ ಅರಣ್ಯ ಪ್ರದೇಶದಲ್ಲಿ, ಮಹಾರಾಜರ ಕಾಲದಿಂದಲೂ ಭಕ್ತರ ಆರಾಧ್ಯ ದೈವವಾಗಿ ನೆಲೆಸಿರುವ ೧೫೦ ವರ್ಷಗಳ ಇತಿಹಾಸವಿರುವ ಕಾಕತೋಡು ವನಮಾರ್ಗ ಶ್ರೀ ಭಗವತಿ ದೇವಿ ಕ್ಷೇತ್ರಕ್ಕೆ ಕೊನೆಗೂ ಕಾನೂನು ತೊಡಕುಗಳು ನಿವಾರಣೆಯಾಗಿ ಹೊಸ ಕಾಯಕಲ್ಪ ದೊರಕಿದೆ.

ದೇವಸ್ಥಾನದ ಜಾಗಕ್ಕೆ ಸಂಬAಧಿಸಿದAತೆ ದಶಕಗಳಿಂದ ಇದ್ದ ಅರಣ್ಯ ಇಲಾಖೆಯ ಗೊಂದಲ ಹಾಗೂ ಕಾನೂನು ಹೋರಾಟಗಳು ಈಗ ಸುಖಾಂತ್ಯ ಕಂಡಿದ್ದು, ಸರಕಾರದ ವಿಶೇಷ ಪ್ರಯತ್ನದಿಂದ ದೇವಸ್ಥಾನದ ಜಾಗದ ಸರ್ವೆ ಕಾರ್ಯ ಸಂಪೂರ್ಣಗೊAಡು ದೇಗುಲಕ್ಕೆ ಜಾಗ ಅಧಿಕೃತವಾಗಿ ಮರಳಿ ಲಭಿಸಿದೆ.

ದೇವಾಲಯದ ಐತಿಹಾಸಿಕ ಹಿನ್ನೆಲೆ

ವೀರಾಜಪೇಟೆ ತಾಲೂಕಿನ ಗಡಿಭಾಗ, ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕುಟ್ಟ ಅರಣ್ಯ ವಲಯದಲ್ಲಿ ಈ ಪವಿತ್ರ ಕ್ಷೇತ್ರ ನೆಲೆಗೊಂಡಿದೆ. ದಟ್ಟ ಕಾಡಿನ ಅಂಚಿನಲ್ಲಿರುವ ಈ ದೇಗುಲದ ಹತ್ತಿರವೇ ನದಿ ಹರಿಯುವುದರಿಂದ ಇಲ್ಲಿ ಅತ್ಯಂತ ಪ್ರಶಾಂತ ವಾತಾವರಣವಿದೆ. ಸ್ವಾತಂತ್ರ÷್ಯ ಪೂರ್ವದಲ್ಲಿ ಕೇರಳದಿಂದ ಕರ್ನಾಟಕಕ್ಕೆ ಗಡಿಭಾಗದಿಂದ ಸಾರಿಗೆ ಸಂಪರ್ಕ ಸಾಧಿಸಲು ಕಡಿದಾದ ಮಾರ್ಗವನ್ನು ನಿರ್ಮಿಸಲಾಗಿತ್ತು. ಅಂದಿನ ದಿನಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ದಟ್ಟವಾದ ಅರಣ್ಯವಿದ್ದ ಕಾರಣ ವನ್ಯಜೀವಿಗಳ ಸಂಚಾರ ಅತ್ಯಧಿಕವಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ದಾರಿಹೋಕರು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಭಯದ ನೆರಳಿನಲ್ಲಿ ಓಡಾಡುವ ಪರಿಸ್ಥಿತಿ ಇತ್ತು. ಕಿರಿದಾದ ದಾರಿಯಾಗಿದ್ದರಿಂದ ಆಗಾಗ್ಗೆ ವಾಹನ ಅಪಘಾತಗಳು ಸಂಭವಿಸಿ ಪ್ರಾಣಹಾನಿಗಳು ಉಂಟಾಗುತ್ತಿದ್ದವು. ಇದರಿಂದ ಕಂಗಾಲಾಗಿದ್ದ ವಾಹನ ಸವಾರರು ದೇವಿಗೆ ಕಾಣಿಕೆ ಅರ್ಪಿಸಿ, ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ನಂತರ ವಾಹನ ಚಾಲನೆಗೆ ಮುಂದಾಗುತ್ತಿದ್ದರು. ದೇವಿ ಆ ಮಾರ್ಗದಲ್ಲಿ ಯಾವುದೇ ಅಡಚಣೆಯಿಲ್ಲದೆ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುತ್ತಾಳೆ ಎಂಬ ಗಾಢ ನಂಬಿಕೆ ಅಂದಿನಿAದಲೂ ಚಾಲ್ತಿಯಲ್ಲಿದೆ. ಪ್ರತಿ ಶುಕ್ರವಾರ ವಿಶೇಷ ಪೂಜೆ, ವಾರ್ಷಿಕ ದೇವಿ ಜಾತ್ರಾ ಮಹೋತ್ಸವ ಹಾಗೂ ತಿಂಗಳ ಕೊನೆಯ ಶುಕ್ರವಾರ ವಿಶೇಷ ಮಹಾಪೂಜೆಗಳು ಇಲ್ಲಿ ಸಲ್ಲಿಕೆಯಾಗುತ್ತವೆ. ಸುಮಾರು ೫೦ ವರ್ಷಗಳ ಹಿಂದೆ ಗ್ರಾಮದ ನಿವಾಸಿಗಳು ಈ ಕ್ಷೇತ್ರವನ್ನು ನವೀಕರಿಸಲು ಮುಂದಾಗಿದ್ದರು. ಹಿಂದೆ ಸಣ್ಣದಾಗಿದ್ದ ಗುಡಿಯನ್ನು ಭಕ್ತರ ಅನುಕೂಲಕ್ಕಾಗಿ ದೊಡ್ಡ ದೇವಾಲಯವಾಗಿ ನಿರ್ಮಿಸಲಾಯಿತು.

ಜಾಗದ ವಿವಾದ ಮತ್ತು ಅರಣ್ಯ ಇಲಾಖೆಯ ಆಕ್ಷೇಪಣೆಗಳ ಹಿನ್ನೆಲೆ

ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಅಥವಾ ಸರಕಾರದ ಅನುದಾನಗಳನ್ನು ಪಡೆಯಲು ಅಧಿಕೃತ ದಾಖಲೆಗಳು ಇಲ್ಲದಿರುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ನೂರಾರು ವರ್ಷಗಳ ಇತಿಹಾಸವಿರುವ ಈ ದೇಗುಲದ ಆಡಳಿತ ಮಂಡಳಿ ರಚನೆಯಾಗಿ ಸುಮಾರು ೫೦ ವರ್ಷಗಳು ಸಂದಿದ್ದರೂ, ದಾಖಲೆಗಳಿಲ್ಲದೆ ಅಭಿವೃದ್ಧಿ ಕುಂಠಿತಗೊAಡಿತ್ತು.

ದಾಖಲೆ ಪತ್ರಗಳನ್ನು ಪಡೆದುಕೊಳ್ಳಲು ೨೦೦೧ರಲ್ಲಿಯೇ ಆಡಳಿತ ಮಂಡಳಿ ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಜಿಲ್ಲಾಧಿಕಾರಿಗಳ ಕಚೇರಿ ದಾಖಲೆಗಳನ್ವಯ, ಹೆಗ್ಗಳ ಗ್ರಾಮದ ಸರ್ವೆ ನಂ. ೨೧೧/೫ ರಲ್ಲಿರುವ ೧೮.೩೦ ಎಕರೆ ಪ್ರದೇಶವು ೧೭೭೦ ರಿಂದ ೨೦೦೧ ರವರೆಗೆ ‘ರೇಡಿಮ್' ಜಾಗವೆಂದೂ, ಕಚೇರಿ ಜಮಾಬಂದಿ ೧೯೩೦-೧೯೩೩ ರವರೆಗೆ ‘ಮೀಸಲು ಅರಣ್ಯ ಪ್ರದೇಶ' ಎಂದೂ ನಮೂದಾಗಿತ್ತು. ಅದಕ್ಕೂ ಮುನ್ನ ೧೯೧೯ರಲ್ಲೇ ಪೋರ್ಟ್ಲ್ಯಾಂಡ್ ರಬ್ಬರ್ ಎಸ್ಟೇಟ್ ಕಂಪೆನಿಯ ಹೆಸರಿಗೆ ಈ ಮೀಸಲು ಅರಣ್ಯ ಪ್ರದೇಶವನ್ನು ಕೃಷಿಗೆ ಸಂಬAಧಿಸಿದAತೆ ೯೯ ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲಾಗಿತ್ತು.

ಸರ್ವೆ ನಂ. ೨೧೧/೫ರ ಪ್ರದೇಶದಲ್ಲಿದ್ದ ೧೮.೩೦ ಎಕರೆ ಪ್ರದೇಶದಿಂದ ೨ ಎಕರೆ ೬೦ ಸೆಂಟ್ ಜಾಗವನ್ನು ವಿಂಗಡಿಸಿ ದೇವಿ ದೇವಾಲಯದ ಹೆಸರಿನಲ್ಲಿ ದಾಖಲು ಮಾಡಿಕೊಡುವಂತೆ ಕೋರಿ ದೇವಸ್ಥಾನದ ಆಡಳಿತ ಮಂಡಳಿಯು ಬೇಟೋಳಿ ಗ್ರಾಮ ಪಂಚಾಯಿತಿ, ತಹಶೀಲ್ದಾರ್, ಜಿಲ್ಲಾಧಿಕಾರಿಗಳು, ಶಾಸಕರಿಗೆ ಮನವಿ ಸಲ್ಲಿಸಿತ್ತು. ಆದರೆ ಜಾಗವು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಇಲಾಖೆ ತೀವ್ರ ಆಕ್ಷೇಪಣೆಗಳನ್ನು ಸಲ್ಲಿಸಿತ್ತು.

ನಿರಂತರ ಹೋರಾಟ ಮತ್ತು ಸರ್ವೆ ಕಾರ್ಯ ಪೂರ್ಣ

ದೇವಸ್ಥಾನಕ್ಕೆ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ೧೮/೧೧/೨೦೨೦ ರಂದು ಸರಕಾರಕ್ಕೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಮುಖಾಂತರ ಅಂದಿನ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಪರಿಗಣಿಸಿ ದೇವಸ್ಥಾನಕ್ಕೆ ದಾಖಲೆಗಳನ್ನು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಪತ್ರ ಬರೆದಿದ್ದರು.

ನಂತರ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅವರ ವಿಶೇಷ ಪ್ರಯತ್ನ ಹಾಗೂ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಜಾಗವನ್ನು ಸರ್ವೆ ಮಾಡಲು ಆದೇಶ ಹೊರಬಂತು. ಆಡಳಿತ ಮಂಡಳಿಯ ಸದಸ್ಯರ ಸತತ ಹೋರಾಟದ ಫಲವಾಗಿ ಅಂತಿಮವಾಗಿ ಸರ್ವೆ ಕಾರ್ಯ ಪೂರ್ಣಗೊಂಡಿದೆ.

ದಿನಾAಕ ೧೯.೦೯.೨೦೨೪ ರಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ವೀರಾಜಪೇಟೆ ಇವರ ಆದೇಶದಂತೆ, ೧೩.೧೧.೨೦೨೪ ರಂದು ಭೂದಾಖಲೆಗಳ ಅಧಿಕಾರಿಗಳಾದ ಸೂರ್ಯಪ್ರಕಾಶ್ ಅವರ ಸಮ್ಮುಖದಲ್ಲಿ ಸರ್ವೆ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು. ಇದು ದೇವಾಲಯದ ಅಭಿವೃದ್ಧಿಗೆ ಹಾಕಿರುವ ಪ್ರಥಮ ಹೆಜ್ಜೆಯಾಗಿತ್ತು.

ಮುಂದಿನ ಯೋಜನೆಗಳು

ದೇವಾಲಯದ ಅಧ್ಯಕ್ಷ ರಾಧಾಕೃಷ್ಣ ಈ ಕುರಿತು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಹಳೆಯ ದೇಗುಲಗಳಿಗೆ ಸರಕಾರದ ಅನುದಾನ ಪಡೆಯಲು ದಾಖಲೆ ಸೇರಿಸುವುದು ಕಷ್ಟಸಾಧ್ಯವಾಗಿತ್ತು. ಹಳೆಯ ಆಡಳಿತ ಮಂಡಳಿಯವರು ಅರಣ್ಯ ಇಲಾಖೆಯ ಸಮಸ್ಯೆಯಿಂದ ಜಾಗದ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಸ್ತುತ ಆಡಳಿತ ಮಂಡಳಿಯ ನಿರಂತರ ಪ್ರಯತ್ನ ಮತ್ತು ದೇವಿಯ ಅನುಗ್ರಹದಿಂದ ಜಾಗ ಮರಳಿ ದೊರೆತಿದೆ ಎಂದಿದ್ದಾರೆ.

ಉಪಾಧ್ಯಕ್ಷ ಎನ್.ಸಿ. ವಿಜಯಕುಮಾರ್ ಮಾಹಿತಿ ನೀಡಿ, ಕಾವೇರಿ ನದಿ ತೀರದ ಹತ್ತಿರವಿರುವ ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ತೆರಳುವ ಪ್ರತಿಯೊಬ್ಬ ಭಕ್ತರು ಮೊದಲು ಈ ಭಗವತಿ ದೇವಿ ಕ್ಷೇತ್ರದಲ್ಲಿ ವಿರಮಿಸಿ, ದರ್ಶನ ಪಡೆದು ಮುಂದೆ ತೆರಳಬಹುದು. ದೇವಾಲಯದ ಸುತ್ತಲೂ ಕಾಂಪೌAಡ್ ಅಳವಡಿಸಬೇಕಾಗಿದ್ದು, ಇದಕ್ಕೆ ಸರಕಾರದ ಅನುದಾನ ಬಿಡುಗಡೆ ಮಾಡುವಂತೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತವು ವಿಶೇಷ ಗಮನಹರಿಸಬೇಕು. ಶೀಘ್ರದಲ್ಲೇ ದೇಗುಲದ ಹೆಸರಿಗೆ ಅಧಿಕೃತ ದಾಖಲೆಪತ್ರಗಳು ದೊರೆಯುವ ಸಂಪೂರ್ಣ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.