ಚೆಯ್ಯAಡಾಣೆ, ಅ. ೨೩: ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ, ಸಂತ ಅನ್ನಮ್ಮ ದೇವಾಲಯ ವೀರಾಜಪೇಟೆ ಇವರ ವತಿಯಿಂದ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ನವೆಂಬರ್ ೨೮ ಮತ್ತು ೨೯ರಂದು ವೀರಾಜಪೇಟೆಯ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಕುರಿತು ವೀರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಡೇನಿಯಲ್ ಸಾಲ್ಡಾನಾ ಅವರು, ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘವು ಕ್ರೀಡಾಕೂಟಗಳ ಆಯೋಜನೆಯ ಮೂಲಕ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡುತ್ತಿದೆ ಎಂದರು. ಕಳೆದ ಬಾರಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆದಿದ್ದು, ಈ ಬಾರಿ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಎಲ್ಲಾ ಸಮಾಜದ ಕ್ರೀಡಾಪಟುಗಳಿಗೂ ಮುಕ್ತ ಅವಕಾಶ ನೀಡಲಾಗಿದ್ದು, ಕೊಡಗು ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಆಟಗಾರರು ಭಾಗವಹಿಸಿ ಪಂದ್ಯಾಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೩೧,೦೦೦ ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೨೧,೦೦೦ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯಕ್ತಿಕ ವಿಭಾಗಗಳಲ್ಲಿಯೂ ಬಹುಮಾನಗಳನ್ನು ವಿತರಿಸಲಾಗುವುದು. ಪ್ರವೇಶ ಶುಲ್ಕವನ್ನು ರೂ. ೨,೦೦೦ ಎಂದು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಸಂಘದ ಕ್ರೀಡಾ ಕಾರ್ಯದರ್ಶಿ ಬಿಲ್ಟನ್ ವಾಸ್ ಮಾತನಾಡಿ, ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಒಟ್ಟು ೨೦ ತಂಡಗಳಿಗೆ ಮಾತ್ರ ಅವಕಾಶವಿದ್ದು, ಹೊರ ಜಿಲ್ಲೆಯ ಆಟಗಾರರಿಗೆ ಅವಕಾಶವಿರುವುದಿಲ್ಲ. ಪಂದ್ಯಾಟವು ನಾಕೌಟ್ ಮಾದರಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ನೆಲ್ಸನ್ ಇ.ಪಿ. ಮಾತನಾಡಿ, ವಾಲಿಬಾಲ್ ಪಂದ್ಯಾಟ ಕೇವಲ ಕ್ರೀಡೆಯಾಗಿರದೆ ಯುವಶಕ್ತಿಯನ್ನು ಒಂದೆಡೆ ಸೇರಿಸುವ ವೇದಿಕೆಯಾಗಿದೆ. ಏಕತೆ, ಆರೋಗ್ಯ ಮತ್ತು ಉತ್ತಮ ಸ್ನೇಹ ಸಂಬAಧಗಳನ್ನು ಬೆಳೆಸುವಲ್ಲಿ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ಪಂದ್ಯಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮ್ಯಾಥ್ಯೂ ಮಾತನಾಡಿ, ಗ್ರಾಮೀಣ ಭಾಗದ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬಾರಿ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಎಲ್ಲಾ ಜನಾಂಗದ ಕ್ರೀಡಾಪಟುಗಳಿಗೂ ಭಾಗವಹಿಸಲು ಅವಕಾಶವಿದ್ದು, ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಸAಘದ ಉಪಾಧ್ಯಕ್ಷ ರಿಯೋನ್ ಲೋಬೋ ಮಾತನಾಡಿ, ಸುಮಾರು ೨೦ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ವಾಲಿಬಾಲ್ ಪಂದ್ಯಾಟವನ್ನು ಮತ್ತೆ ಆಯೋಜಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದು ಕರೆ ನೀಡಿದರು.
ಪಂದ್ಯಾಟದಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ನವೆಂಬರ್ ೨೨, ೨೦೨೬ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ತಂಡಗಳ ನೋಂದಣಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.೯೮೮೦೨೩೭೦೨೧/ ೯೪೮೦೬೦೫೨೩೮/ ೭೯೭೫೩೧೮೦೭೧