ಮಡಿಕೇರಿ, ಅ. ೨೩: ಮಡಿಕೇರಿ ನಗರದಲ್ಲಿ ತಲೆದೋರಿರುವ ಕಸದ ಸಮಸ್ಯೆಗೆ ಕೂಡಲೇ ಮುಕ್ತಿ ಕಾಣಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರಸಭಾಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸ್ತುತ ಮಂಡಳಿ ಅವಧಿಯ ಕೊನೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು; ಸ್ಟೋನ್ ಹಿಲ್ನಲ್ಲಿ ಸಂಗ್ರಹವಾಗಿರುವ ಹಳೆಯ ಪಾರಂಪರಿಕ ಕಸವನ್ನು ಆದಷ್ಟು ಶೀಘ್ರ ತೆರವು ಮಾಡಬೇಕು. ಈಗಾಗಲೇ ವಿಂಗಡಣೆ ಮಾಡಲಾಗಿರುವ ಕಸವನ್ನು ತೆರವುಗೊಳಿಸಲು ಗುತ್ತಿಗೆದಾರ ಒಪ್ಪಿಕೊಂಡಿದ್ದು, ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ೨೦೦೪ರಲ್ಲಿ ಆಗಿರುವ ತಪ್ಪಿಗೆ ಇದೀಗ ಜನ ನಮ್ಮನ್ನು ನಿಂದಿಸುತ್ತಿದ್ದಾರೆ, ನಾವೇನೂ ಮಾಡುತ್ತಿಲ್ಲವೆಂದು ದೂರುತ್ತಿದ್ದಾರೆ. ಆದಷ್ಟು ಶೀಘ್ರ ತೆರವುಗೊಳಿಸಬೇಕೆಂದು ಸೂಚಿಸಿದರು. ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್; ಇದುವರೆಗೆ ಆಗಿರುವ ಕಾಮಗಾರಿಯ ಹಣ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿದಲ್ಲಿ ತೆರವುಗೊಳಿಸುವದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಒಟ್ಟು ೭೫ಸಾವಿರ ಟನ್ ವಿಂಗಡಣೆ ಮಾಡಲಾಗಿದ್ದು, ಇನ್ನೂ ೫ಸಾವಿರ ಮೆಟ್ರಿಕ್ ಟನ್ ಬಾಕಿ ಇರುವದಾಗಿ ಅಂದಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕರು ಮಾತನಾಡಿ; ಹೆಚ್ಚುವರಿ ಕೆಲಸವನ್ನು ಅದೇ ಗುತ್ತಿಗೆದಾರರಿಂದ ಮುಂದುವರಿಸಲು ಸಾಧ್ಯವಿಲ್ಲ, ಮತ್ತೆ ಯೋಜನಾ ವರದಿ ತಯಾರಿಸಿ, ಟೆಂಡರ್ ಕರೆದು ತೆರವುಗೊಳಿಸಬೇಕು. ಹೆಚ್ಚುವರಿ ಅನುದಾನ ಒದಗಿಸಲು ಪ್ರಯತ್ನಿಸಲಾಗುವದು. ಇಲ್ಲವಾದಲ್ಲಿ ಇದುವರೆಗೆ ಮಾಡಿದ ಕೆಲಸ ವಿಫಲವಾಗಲಿದೆ ಎಂದು ಹೇಳಿದರು.
ಬಯೋ ಗ್ಯಾಸ್ಗೆ ಅನುಮತಿ
ನಗರದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹಸಿ ಕಸದಿಂದ ಬಯೋಗ್ಯಾಸ್ ತಯಾರಿಸುವ ನಿಟ್ಟಿನಲ್ಲಿ ಆಯ್ಕೆಯಾಗುವ ಸಂಸ್ಥೆಗೆ ಅನುಮತಿ ನೀಡಲು ತೀರ್ಮಾನಿಸಲಾಯಿತು. ಸಭೆಗೆ ಆಗಮಿಸಿದ್ದ ಪುತ್ತೂರಿನಲ್ಲಿ ಬಯೋಗ್ಯಾಸ್ ಘಟಕ ನಿರ್ವಹಣೆ ಮಾಡುತ್ತಿರುವ ಪ್ರಶಾಂತ್ ಮಾಹಿತಿ ನೀಡಿ; ಹಸಿ ಕಸದಿಂದ ವೈಜ್ಞಾನಿಕವಾಗಿ ಗ್ಯಾಸ್ ತಯಾರಿಸಲಾಗುತ್ತದೆ, ಘಟಕ ಸ್ಥಾಪನೆಗೆ ಅರ್ಧ ಎಕರೆ ಜಾಗದ ಅವಶ್ಯಕತೆಯಿದೆ, ಒಂದು ಎಕರೆ ಜಾಗ ಸಿಕ್ಕರೆ ಉತ್ತಮ, ೨೫ ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಿಸಲಿದ್ದು ನಂತರ ನಗರಸಭೆಗೆ ಹಸ್ತಾಂತರಿಸಲಾಗುವುದೆAದು ಹೇಳಿದರು.
ಮತ್ತೋರ್ವ ಡಾ. ಶೇಖರ್ ಮಾತನಾಡಿ; ಅರ್ಧ ಎಕರೆ ಜಾಗ, ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿದಲ್ಲಿ ಘಟಕ ಸ್ಥಾಪನೆ ಮಾಡಲಾಗುವದು. ಇಲ್ಲವಾದಲ್ಲಿ ಕುಶಾಲನಗರದವರೆಗೆ ಕಸ ಸಾಗಿಸಿಕೊಟ್ಟಲ್ಲಿ ಅದನ್ನು ಹುಣಸೂರಿಗೆ ಕೊಂಡೊಯ್ದು ಅಲ್ಲಿ ಸಂಸ್ಕರಿಸಿ ಗ್ಯಾಸ್ ತಯಾರು ಮಾಡಲಾಗುವುದೆಂದು ಹೇಳಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಕಸ ಸಂಗ್ರಹಣೆಗೆ ಖಾಸಗಿ ಜಾಗ ಗುರುತಿಸಲಾಗಿದೆ. ಸರಕಾರಿ ಜಾಗ ಒದಗಿಸಿಕೊಟ್ಟಲ್ಲಿ ಮತ್ತಷ್ಟು ಅನುಕೂಲವಾಗಲಿದೆ. ಆರು ತಿಂಗಳಲ್ಲಿ ಘಟಕ ಸ್ಥಾಪನೆ ಮಾಡಲಾಗುವುದೆಂದು ಹೇಳಿದರು.
ಈ ಸಭೆಯಲ್ಲಿ ಚರ್ಚೆಗಳು ನಡೆದವು. ಎರಡೂ ಸಂಸ್ಥೆಗಳ ಪ್ರತಿನಿಧಿಗಳನ್ನು ಮತ್ತೊಮ್ಮೆ ಬರಹೇಳಿ ಯಾವುದು ಸಾಧ್ಯವೋ ಅದಕ್ಕೆ ಅನುಮತಿ ನೀಡುವಂತೆ ತೀರ್ಮಾನಿಸಲಾಯಿತು. ಮಡಿಕೇರಿಯಲ್ಲಿ ಆರಂಭಿಸುವದಾದರೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಜಾಗವನ್ನು ಕಾಯ್ದಿರಿಸುವಂತೆ ತೀರ್ಮಾನಿಸಲಾಯಿತು. ಬಹುತೇಕ ಸದಸ್ಯರುಗಳು ಕಸವನ್ನು ಕುಶಾಲನಗರ ಅಥವಾ ಹುಣಸೂರು ಘಟಕಕ್ಕೆ ಸಾಗಿಸುವುದೇ ಉತ್ತಮವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಹಸಿ ಕಸ ಸಾಗಾಟ
ಬಯೋ ಗ್ಯಾಸ್ ಘಟಕ ಸ್ಥಾಪನೆಗೆ ಕನಿಷ್ಟ ಆರು ತಿಂಗಳಿನಿAದ ಒಂದು ವರ್ಷ ಕಾಲ ಬೇಕಾಗುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹಸಿ ಕಸವನ್ನು ಸಾಗಾಟ ಮಾಡುವ ಬಗ್ಗೆ ಚರ್ಚೆ ನಡೆಯಿತು. ಈ ಸಂಬAಧ ಸಭೆಗೆ ಆಗಮಿಸಿದ್ದ ಖಾಸಗಿ ಸಂಸ್ಥೆಯ ಪುಷ್ಕರ್ ಮಾಹಿತಿ ನೀಡಿ; ಮಡಿಕೇರಿ ಸುತ್ತಮುತ್ತಲ ತೋಟದ ಬೆಳೆಗಾರರನ್ನು ಸಂಪರ್ಕಿಸಲಾಗಿದೆ. ಕಸಗಳನ್ನು ನಗರಸಭೆ ವಾಹನದಲ್ಲಿ ತೋಟಗಳಿಗೆ ಸಾಗಾಟ ಮಾಡಿಕೊಟ್ಟರೆ ತೋಟದಲ್ಲಿ ಸಂಗ್ರಹಿಸಿ ಸಾವಯವ ಗೊಬ್ಬರ ತಯಾರು ಮಾಡಲಾಗುವದು ಎಂದು ತಿಳಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಕಸವನ್ನು ಸಾರ್ವಜನಿಕವಾಗಿ ಎಲ್ಲಯೂ ಸಂಗ್ರಹ ಮಾಡುವಂತಿಲ್ಲ, ಕಸದ ಗಾಡಿಗಳನ್ನೂ ನಿಲ್ಲಿಸಿಕೊಳ್ಳುವಂತಿಲ್ಲ, ಒಂದು ವೇಳೆ ತೋಟದ ಮಾಲೀಕರು ಕಸ ನಿರಾಕರಿಸಿದರೆ ಆ ಕಸದ ವಿಲೇವಾರಿ ಹೇಗೇ, ಕಾರ್ಮಿಕರು, ಚಾಲಕರ ವ್ಯವಸ್ಥೆ, ಖರ್ಚು ವೆಚ್ಚದ ಬಗ್ಗೆ ತೀರ್ಮಾನವಾಗಬೇಕಿದೆ ಎಂದು ಹೇಳಿದರು. ಸದಸ್ಯರುಗಳು ಹಲವು ಸಲಹೆಗಳನ್ನು ನೀಡಿದರು. ಅಂತಿಮವಾಗಿ ಶಾಸಕರು ೧೦೦ ಮಂದಿ ಬೆಳೆಗಾರರ ಪಟ್ಟಿ ಮಾಡಿ ಮತ್ತೊಮ್ಮೆ ಸಂಪರ್ಕಿಸುವAತೆ ಗುತ್ತಿಗೆದಾರರಿಗೆ ಹೇಳಿದರು.
ಒಣ ಕಸ ವಿಂಗಡಣೆ
ಒಣ ಕಸ ಸಂಗ್ರಹ ಮಾಡಿ ವಿಂಗಡಣೆ ಮಾಡುವ ಬಗ್ಗೆ ಸಭೆಗೆ ಆಗಮಿಸಿದ್ದ ಅನಿಲ್ ಮಾಹಿತಿ ನೀಡಿದರು. ಸಂಗ್ರಹವಾಗುವ ಕಸಗಳನ್ನು ನಾಲ್ಕು ವಿವಿಧ ರೀತಿಯಾಗಿ ವಿಂಗಡಣೆ ಮಾಡಲಾಗುವದು. ಮರು ಬಳಕೆಯಾಗುವ ಕಸಗಳನ್ನು ಪ್ರತ್ಯೇಕಿಸಲಾಗುವದು, ೨೦ ಮಂದಿ ಕಾರ್ಮಿಕರನ್ನು ಬಳಸಿಕೊಂಡು ವಿಂಗಡಣೆ ಮಾಡಿ ಸಾಗಾಟ ಮಾಡಲಾಗುವುದೆಂದು ಹೇಳಿದರು. ಪ್ರತಿಕ್ರಿಯಿಸಿದ ಶಾಸಕರು ಎಲ್ಲ ರೀತಿಯ ಕಸಗಳನ್ನು ನಿರ್ವಹಣೆ ಮಾಡಬೇಕೆಂದು ಸೂಚಿಸಿದರು. ಇದಕ್ಕೆ ಮೈತ್ರಿ ಸಮುದಾಯ ಭವನದ ಬಳಿ ಇರುವ ಜಾಗವನ್ನು ಕಾಯ್ದಿರಿಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ರಮೇಶ್, ಸದಸ್ಯರುಗಳು ಪಾಲ್ಗೊಂಡಿದ್ದರು.