ವೀರಾಜಪೇಟೆ ಅ. ೨೩ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ನಗರದ ಕಚೇರಿಯಲ್ಲಿ ಆಯುಧ ಪೂಜಾ ಮಹೋತ್ಸವವು ನಡೆಯಿತು.

ಆಯುಧ ಪೂಜೆಯ ಅಂಗವಾಗಿ ಕಚೇರಿಯನ್ನು ವಿವಿಧ ಬಗೆಯ ಹೂವುಗಳಿಂದ ಹಾಗೂ ವರ್ಣರಂಜಿತ ರಂಗೋಲಿಗಳಿAದ ಅಲಂಕರಿಸಲಾಗಿತ್ತು. ಕಚೇರಿಯ ಸಾಮಗ್ರಿಗಳು, ಗಣಕಯಂತ್ರಗಳು ಹಾಗೂ ಪರಿಕರ ಗಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಯುಧ ಪೂಜೆ ನೆರವೇರಿಸಿ, ಮಹಾಮಂಗಳಾರತಿ ಮಾಡಿ ಭಕ್ತಿ ಸಮರ್ಪಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಹಾಗೂ ಒಕ್ಕೂಟದ ಸದಸ್ಯರುಗಳ ವಾಹನಗಳನ್ನು ಹೂಮಾಲೆಗಳಿಂದ ಅಲಂಕರಿಸಿ, ವಿಶೇಷ ಆಯುಧ ಪೂಜೆ ನೆರವೇರಿಸಿದರು. ಬಳಿಕ ಆಗಮಿಸಿದ್ದ ಭಕ್ತಾದಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯೋಜನಾ ನಿರ್ದೇಶಕರಾದ ವಿಠಲ್ ಸಾಲ್ಯಾನ್ ಅವರು, ನವರಾತ್ರಿಯ ಶುಭ ವೇಳೆಯಲ್ಲಿ ಶಕ್ತಿ ದೇವತೆಗಳ ಆರಾಧನೆ ಹಾಗೂ ಕಾಯಕದ ಉಪಕರಣಗಳಿಗೆ ಗೌರವ ಸಲ್ಲಿಸುವ ಆಯುಧ ಪೂಜೆಯನ್ನು ನೆರವೇರಿಸಲಾಗುತ್ತದೆ. ಇದರ ಅಂಗವಾಗಿ ಕಚೇರಿಯಲ್ಲಿ ಹಾಗೂ ವಾಹನಗಳಿಗೆ ಆಯುಧ ಪೂಜೆ ನಡೆಸಲಾಗಿದೆ. ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ಹಾಗೂ ಶಕ್ತಿ ದೇವತೆಗಳ ಅನುಗ್ರಹದಿಂದ ಉತ್ತಮ ಮಳೆ-ಬೆಳೆಯಾಗಿ ಕರುನಾಡು ಸಮೃದ್ಧವಾಗಿರಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ, ಕೃಷಿ ಅಧಿಕಾರಿ ವಸಂತ್, ಮೇಲ್ವಿಚಾರಕರಾದ ಶಿವಕುಮಾರ್, ತೀರ್ಥ ಕುಮಾರ್, ಧನೇಶ್ ಸೇರಿದಂತೆ ವಿವಿಧ ವಲಯಗಳ ಮೇಲ್ವಿಚಾರಕರು, ಒಕ್ಕೂಟದ ಸದಸ್ಯರು, ಕಚೇರಿ ಸಿಬ್ಬಂದಿಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.