ಕುಶಾಲನಗರ, ಅ. ೨೨: ಮೈಸೂರಿನಲ್ಲಿ ನಡೆದ ಅದ್ದೂರಿ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಿದ ಕ್ಯಾಪ್ಟನ್ ಪ್ರಶಾಂತ್ ನೇತೃತ್ವದ ಗಜಪಡೆ ದಸರಾ ಸಂಭ್ರಮವನ್ನು ಮುಗಿಸಿ ಮರಳಿ ದುಬಾರೆ ಆನೆ ಶಿಬಿರಕ್ಕೆ ಆಗಮಿಸಿದೆ.

ಪ್ರಥಮ ಬಾರಿಗೆ ಅಂಬಾರಿ ಹೊತ್ತು ಮೈಸೂರು ದಸರೆಯಲ್ಲಿ ಗಮನ ಸೆಳೆದ ದುಬಾರೆ ಶಿಬಿರದ ಪ್ರಶಾಂತ್, ಶ್ರೀರಂಗಪಟ್ಟಣ ದಸರಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಧನಂಜಯ, ತುಮಕೂರು ದಸರಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಹಾರಂಗಿ ಶಿಬಿರದ ಲಕ್ಷö್ಮಣ ಸೇರಿದಂತೆ ಗೋಪಿ, ಶ್ರೀರಾಮ, ಸುಗ್ರೀವ ಹಾಗೂ ಕಾವೇರಿ ಆನೆಗಳು ಮೈಸೂರಿನಿಂದ ದುಬಾರೆ ಶಿಬಿರಕ್ಕೆ ಮರಳಿವೆ.

ಆಗಸ್ಟ್ ೨೬ರಂದು ದುಬಾರೆ ಶಿಬಿರದಿಂದ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಮೈಸೂರಿಗೆ ತೆರಳಿದ್ದ ಆನೆಗಳ ತಂಡ ಸುಮಾರು ಎರಡು ತಿಂಗಳ ಕಾಲ ದಸರಾ ಸಿದ್ಧತೆ ಹಾಗೂ ಜಂಬೂ ಸವಾರಿಯ ಕರ್ತವ್ಯದಲ್ಲಿ ಭಾಗವಹಿಸಿತ್ತು.

ದಸರಾ ಕರ್ತವ್ಯ ಪೂರ್ಣಗೊಳಿಸಿದ ಬಳಿಕ ಆನೆಗಳನ್ನು ಲಾರಿಗಳ ಮೂಲಕ ಪಿರಿಯಾಪಟ್ಟಣ-ಮಾಲ್ದಾರೆ ಮಾರ್ಗವಾಗಿ ದುಬಾರೆ ಶಿಬಿರಕ್ಕೆ ಕರೆತರಲಾಯಿತು. ಶಿಬಿರಕ್ಕೆ ಆಗಮಿಸಿದ ಗಜಪಡೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು.

- ಚಂದ್ರಮೋಹನ್