ಪೊನ್ನಂಪೇಟೆ, ಅ. ೧೯: ಶ್ರೀ ಕಾವೇರಿ ದಸರಾ ಸಮಿತಿ, ಗೋಣಿಕೊಪ್ಪಲು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ಸಂಜಿತ್ ಹೆಗಡೆ ಮತ್ತು ತಂಡದವರ ಲೈವ್ ಇನ್ ಕಾನ್ಸರ್ಟ್ ಜನರ ಮನಸೆಳೆಯಿತು.
ಅದ್ಭುತ ತಾಂತ್ರಿಕ ದೀಪಾಲಂಕಾರ, ಭರ್ಜರಿ ಧ್ವನಿವರ್ಧಕಗಳ ಅಬ್ಬರದ ನಡುವೆ ವೇದಿಕೆಗೆ ಸಂಜಿತ್ ಹೆಗಡೆ ಪ್ರವೇಶಿಸುತ್ತಿದ್ದಂತೆ ಯುವ ಸಮೂಹದ ಹರ್ಷೋದ್ಗಾರ ಮುಗಿಲು ಮುಟ್ಟಿತು. ನೆಚ್ಚಿನ ಗಾಯಕನನ್ನು ಕಂಡ ಸಂಭ್ರಮದಲ್ಲಿ ಮೈದಾನವೇ ಚಪ್ಪಾಳೆ, ಶಿಳ್ಳೆ ಹಾಗೂ ಕೂಗುಗಳಿಂದ ಮಾರ್ದನಿಸಿತು.
‘ಖುಶ್ ಖುಶ್’, ‘ಮಾಯಾವಿ‘, ‘ನೆನ್ನೆ ತನಕ’ ಸೇರಿದಂತೆ ತಮ್ಮ ಜನಪ್ರಿಯ ಸೂಪರ್ಹಿಟ್ ಗೀತೆಗಳನ್ನು ಹಾಡಿದ ಸಂಜಿತ್ ಹೆಗಡೆ, ತಮ್ಮ ವಿಶಿಷ್ಟ ಗಾಯನದ ಮೂಲಕ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು. ರಾಕ್ ಹಾಗೂ ಪಾಪ್ ಶೈಲಿಯ ಸಮ್ಮಿಶ್ರಣದ ಅವರ ಗಾಯನಕ್ಕೆ ಯುವಕ-ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಹಾಡೊAದರ ಬಳಿಕ ಮತ್ತೊಂದು ಹಾಡು ಮೊಳಗುತ್ತಿದ್ದಂತೆ ಪ್ರೇಕ್ಷಕರ ಉತ್ಸಾಹವೂ ಹೆಚ್ಚುತ್ತಲೇ ಸಾಗಿತು. ಪ್ರತಿಯೊಂದು ಹಾಡಿನ ಅಂತ್ಯದಲ್ಲೂ ಸಹಸ್ರಾರು ಮಂದಿ ಶಿಳ್ಳೆ, ಚಪ್ಪಾಳೆ ಹಾಗೂ ಹರ್ಷೋದ್ಗಾರಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ತಾವು ಹಾಡುವುದರ ಜೊತೆಗೆ ಪ್ರೇಕ್ಷಕರಿಂದಲೂ ಹಾಡಿನ ಸಾಲುಗಳನ್ನು ಹಾಡಿಸಿದ ಸಂಜಿತ್, ಸಂಗೀತ ಪ್ರೇಮಿಗಳೊಂದಿಗೆ ಆತ್ಮೀಯವಾಗಿ ಬೆರೆತು ಸಂಭ್ರಮಿಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂಗೀತ ರಾತ್ರಿಯಲ್ಲಿ ಮಕ್ಕಳು, ಯುವಕರು ಸೇರಿದಂತೆ ಸಾವಿರಾರು ಮಂದಿ ಸಂಗೀತದ ಅಲೆಯಲ್ಲಿ ತೇಲಿದರು. ದಸರಾ ಮೈದಾನದಲ್ಲಿ ನಿರ್ಮಾಣವಾಗಿದ್ದ ಭವ್ಯ ವೇದಿಕೆ, ದೀಪಾಲಂಕಾರ ಹಾಗೂ ಸಂಗೀತದ ಕಂಪನ ಒಟ್ಟಾಗಿ ಗೋಣಿಕೊಪ್ಪಲಿನ ರಾತ್ರಿಯನ್ನು ಮತ್ತಷ್ಟು ರಂಗೇರಿಸಿತು.
ಕಾವೇರಿ ದಸರಾ ಸಮಿತಿ ಅಧ್ಯಕ್ಷ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಪತ್ನಿ ಕಾಂಚನ್ ಪೊನ್ನಣ್ಣ ಅವರೊಂದಿಗೆ ಕಾರ್ಯಕ್ರಮವನ್ನು ಕೊನೆಯವರೆಗೂ ವೀಕ್ಷಿಸಿದರು. ಇದಕ್ಕೂ ಮುನ್ನ ಕೊಡಗಿನ ಉದಯೋನ್ಮುಖ ಗಾಯಕರಾದ ಮನೆಯಪಂಡ ಅಶ್ವಿನ್ ಸುಬ್ಬಯ್ಯ, ಚಂದನ್ ನೆಲ್ಲಿತ್ತಾಯ ಹಾಗೂ ದಿಲನ್ ತಂಡ ರ್ಯಾಪ್ ಸಾಂಗ್ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ನಾಗರಾಜ್ ಚಿತ್ರಗೀತೆಗಳನ್ನು ಹಾಡಿ ಗಮನ ಸೆಳೆದರು.