ಮಡಿಕೇರಿ, ಅ. ೧೯: ಮಡಿಕೇರಿ ದಸರಾಕ್ಕೆ ರಂಗು ತುಂಬುವ ಯುವ ದಸರಾ ಕಾರ್ಯಕ್ರಮ ಈ ಬಾರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿತು.
ನಗರದ ಕಲಾಸಂಭ್ರಮ ವೇದಿಕೆಯಲ್ಲಿ ಭಾನುವಾರ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಫ್ಯಾಷನ್ ಶೋ, ನೃತ್ಯ, ಗಾಯನ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಗಮನ ಸೆಳೆದವು. ಯುವ ಪ್ರತಿಭೆಗಳ ಪ್ರದರ್ಶನಕ್ಕೆ ಸಾಕ್ಷಿಯಾದ ವೇದಿಕೆಯಲ್ಲಿ ಪ್ರೇಕ್ಷಕರು ಹಾಡು, ನೃತ್ಯದ ಸಂಭ್ರಮದಲ್ಲಿ ಮಿಂದೆದ್ದರು.
ಭಾರತೀಯ ಸಾಂಪ್ರದಾಯಿಕ ಉಡುಗೆಗಳ ಸೌಂದರ್ಯವನ್ನು ಅನಾವರಣಗೊಳಿಸಿದ ಫ್ಯಾಷನ್ ಶೋನಲ್ಲಿ ೩೫ ಮಂದಿ ಭಾಗವಹಿಸಿ ಗಮನ ಸೆಳೆದರು. ಇದೇ ಸಂದರ್ಭ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ೧೦ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡು ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದವು.
ಕಲಾವಿದ ಚೇತನ್ ನಾಯಕ್ ನೇತೃತ್ವದ ‘ಸಕ್ಕರೆ ಮಿಠಾಯಿ’ ತಂಡದ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಕೇರಳದ ‘ಡ್ರಮ್ಯಾನೋ ಪರ್ಕ್ಯೂಷನ್’ ವಿಶೇಷ ತಂಡದ ಲೈವ್ ಡ್ರಮ್ ಮ್ಯೂಸಿಕ್ ಪ್ರದರ್ಶನವೂ ಯುವಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿಲ್ಲೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವಶಕ್ತಿ ಮುಂದಾಗಬೇಕು ಎಂದು ಕರೆ ನೀಡಿದರು. ಯುವಕರು ಸರಿದಾರಿಯಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಬೇಕು. ತಮ್ಮ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡು ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಉಪಾಧ್ಯಕ್ಷರಾದ ಮಹೇಶ್ ಜೈನಿ, ವಿ.ಜಿ. ಮೋಹನ್, ಉದ್ಯಮಿ ಶರೀನ್, ಕೋಟೆ ಮಹಾಗಣಪತಿ ದೇವಾಲಯ ಮಂಟಪ ಸಮಿತಿ ಅಧ್ಯಕ್ಷ ಅವರೆಮಾದಂಡ ಶರಣ್ ಪೂಣಚ್ಚ, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಆರ್.ಪಿ. ಚಂದ್ರಶೇಖರ್, ಹೊದ್ದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಂಸ ಕೊಟ್ಟಮುಡಿ, ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್, ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಾನ್ಸನ್ ಪಿಂಟೋ, ಕುಶಾಲನಗರ ಜ್ಞಾನ ಗಂಗಾ ವಸತಿ ಶಾಲೆಯ ಅಧ್ಯಕ್ಷ ಟಿ.ಕೆ. ಸುಧೀರ್, ರಾಜ್ಯ ಸೇವಾದಳದ ಮಾಜಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಗುತ್ತಿಗೆದಾರರಾದ ಶಶಿಕಲಾ, ಉದ್ಯಮಿ ಸೀಮಾ ಚೌದರಿ, ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಹಾಗೂ ಉದ್ಯಮಿ ದಿನೇಶ್ ಎಂ.ಎಸ್. ಉಪಸ್ಥಿತರಿದ್ದರು.
ಯುವ ರ್ಯಾಲಿಪಟುಗಳಾದ ಜತಿನ್ ಕರ್ಕೇರ, ಹಾರ್ದಿಕ್ ಕರ್ಕೇರ ಹಾಗೂ ಶಿಕ್ಷಣ ಕ್ಷೇತ್ರದ ಸಾಧಕಿ ಟಿ.ಆರ್. ವಿಷಯ ಅವರನ್ನು ಸನ್ಮಾನಿಸಲಾಯಿತು.