ಕಕ್ಕಬ್ಬೆ, ಅ. ೧೯: ಕ್ಲೀನ್ ಕಕ್ಕಬ್ಬೆ ಅಭಿಯಾನದಡಿ ಸಂಗ್ರಹಿಸಲಾದ ಒಟ್ಟು ೩,೬೭೦ ಕೆ.ಜಿ. ತ್ಯಾಜ್ಯವನ್ನು ಪರವಾನಗಿ ಪಡೆದ ತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರ ಮೂಲಕ ನಿಗದಿತ ನಿಯಮಗಳಂತೆ ಕೊಡಗಿನಿಂದ ಹೊರಕ್ಕೆ ಸಾಗಿಸಿ ವಿಲೇವಾರಿ ಮಾಡಲಾಯಿತು. ನಾಲ್ಕು ಗ್ರಾಮಗಳ ಪ್ರವಾಸೋದ್ಯಮದ ಪಾಲುದಾರರು, ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳು ಕೈಜೋಡಿಸುವ ಮೂಲಕ ಈ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಗೊಳಿಸಿದರು. ಕಕ್ಕಬ್ಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಳಿಯಂಡ ಸಂಪಾ ಈ ಅಭಿಯಾನದ ನೇತೃತ್ವ ವಹಿಸಿದ್ದರು. ನಾಲಡಿ ಗ್ರಾಮ ಸಂಪೂರ್ಣ ಕಸಮುಕ್ತವಾಗಿದ್ದು, ರಾಜ್ಯ ಹೆದ್ದಾರಿ ೯೦ ಹಾದುಹೋಗುವ ಮರಂದೋಡ ಗ್ರಾಮವೂ ಬಹುತೇಕ ಕಸ ಮುಕ್ತವಾಗಿರುವುದು ಗಮನಾರ್ಹ. ಪ್ರಮುಖ ಪ್ರವಾಸಿ ತಾಣಗಳಿಂದ ಅತ್ಯಲ್ಪ ಪ್ರಮಾಣದ ತ್ಯಾಜ್ಯ ಸಂಗ್ರಹಿಸಲಾಯಿತು. ಕಕ್ಕಬ್ಬೆ-ನೆಲಜಿ ರಸ್ತೆಯಲ್ಲಿ ಅತಿ ಹೆಚ್ಚು ತ್ಯಾಜ್ಯ ಕಂಡು ಬಂದವು.