ವೀರಾಜಪೇಟೆ, ಅ. ೧೮: ವಿದ್ಯಾರ್ಥಿಗಳಲ್ಲಿ ವಿವಿಧ ಪ್ರತಿಭೆಗಳಿದ್ದು ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಪ್ರತಿಭಾ ದಿನಾಚರಣೆಗಳು ಒಂದು ಉತ್ತಮ ವೇದಿಕೆ ಎಂದು ವೀರಾಜಪೇಟೆಯ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ಅಭಿಪ್ರಾಯಪಟ್ಟರು.
ಕಾಲೇಜಿನ ಸಭಾಂಗಣದಲ್ಲಿ ಸಾಂಸ್ಕೃತಿಕ ಘಟಕದಿಂದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವವನ್ನು ನೀಡಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಶಿಕ್ಷಣದ ಮೂಲ ಗುರಿ ಜ್ಞಾನವನ್ನು ಪಡೆಯುವುದಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಶಿಕ್ಷಣ ಹಾಗೂ ಸಾಂಸ್ಕೃತಿಕ, ಕ್ರೀಡೆ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಕಾಲೇಜಿನ ಸಾಂಸ್ಕೃತಿಕ ಘಟಕದ ವತಿಯಿಂದ ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳು ಉತ್ಸಾಹದಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಲು ಭಾಗವಹಿಸುತ್ತಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಆಯೋಜಿಸಲ್ಪಡುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕಿ ಹೇಮ ಬಿ.ಡಿ. ಹಾಗೂ ಸಾಂಸ್ಕೃತಿಕ ಘಟಕದ ಸಂಚಾಲಕಿ ಶಿಲ್ಪ ಕೆ.ಪಿ. ಉಪಸ್ಥಿತರಿದ್ದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಗಮನ ಸೆಳೆದ ಸಾಂಸ್ಕೃತಿಕ ಪ್ರದರ್ಶನ
ಪ್ರತಿಭಾ ದಿನಾಚರಣೆ ಪ್ರಯುಕ್ತ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಪಾಲ್ಗೊಂಡರು. ಪದವಿ ತರಗತಿಗಳ ತರಗತಿವಾರು ಕಾರ್ಯಕ್ರಮವನ್ನು ನೀಡಿದರು. ಒಟ್ಟು ೨೩ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ದುರ್ಗಾ ಮಾತೆಯು ಚಂಡ ಮುಂಡ ರಕ್ಕಸರನ್ನು ಸಂಹರಿಸುವ ಪ್ರಹಸನದ ಸ್ವಾಗತ ನೃತ್ಯವು ಸರ್ವರ ಪ್ರಶಂಸೆಗೆ ಪಾತ್ರವಾಯಿತು. ವೆಸ್ಟರ್ನ್ ಸ್ಟೆçöÊಲ್, ರೆಟ್ರೋ, ಗರ್ಭಾ, ಹಿಪ್ ಹಾಪ್, ಸೆಮಿ ಕ್ಲಾಸಿಕಲ್, ವೆಸ್ಟರ್ನ್ ಡಾನ್ಸ್, ರಾಂಪ್ ವಾಕ್, ಹಾಡು ಹಾಡುವುದು, ನಾಟಕ ಅಭಿನಯ, ಮೂಕ ಪಾತ್ರ ಅಭಿನಯ, ಸಾಂಪ್ರದಾಯಿಕ ನೃತ್ಯಗಳು ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನವನ್ನು ವಿದ್ಯಾರ್ಥಿಗಳು ನೀಡಿದರು. ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ನೋಡುಗರ ಮೆಚ್ಚುಗೆಗೆ ಪಾತ್ರರಾದರು. ಭಾಗವಹಿಸಿದ ವಿದ್ಯಾರ್ಥಿಗಳು ವೇದಿಕೆಯಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಬಹಳ ಉತ್ತಮವಾಗಿ ಮಾಡಿದರು. ಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ತಮ್ಮದೇ ತರಗತಿಯ ವಿದ್ಯಾರ್ಥಿಗಳ ನಿರೂಪಣೆ ಹಾಗೂ ನೃತ್ಯದ ಶೈಲಿಯ ಬಗ್ಗೆ ವಿವರಣೆಯು ಇರುತ್ತಿತ್ತು. ಪದವಿ ಕಾಲೇಜಿನ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.