ಮಡಿಕೇರಿ, ಅ. ೧೮: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ತಾ.೧೭ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂಡಿಬಂದ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.
ಮೈಸೂರಿನ ಪಿ.ವಿ.ಆರ್. ಈವೆಂಟ್ಸ್ ಅಂಡ್ ಎಂಟರ್ಟೈನರ್ಸ್ನ ರಿಷು ಹಾಗೂ ಪುರುಷೋತ್ತಮ್ ದಂಪತಿ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿತು. ವೀರಾಜಪೇಟೆಯ ನಾಟ್ಯ ಮಯೂರಿ ತಂಡದವರ ನೃತ್ಯ ವೈವಿಧ್ಯ, ಮಡಿಕೇರಿಯ ಡ್ಯಾನ್ಸ್ ಲ್ಯಾಬ್ ನ ನೃತ್ಯ ವೈವಿಧ್ಯ, ಮಂಗಳೂರಿನ ಯಶಸ್ವಿ ಡ್ಯಾನ್ಸ್ ಗ್ರೂಪ್ ನ ತುಳುನಾಡ ಸಾಂಸ್ಕೃತಿಕ ವೈಭವ, ಸುಳ್ಯದ ಮಂಜು ಬ್ರದರ್ಸ್ ತಂಡದ ಸಾಂಸ್ಕೃತಿಕ ವೈಭವ ಹಾಗೂ ಕುಶಾಲನಗರದ ಮಂಜು ಭಾರ್ಗವಿ ತಂಡದವರ ವಚನ ವೈಭವ ಕಾರ್ಯಕ್ರಮಗಳು ಅತ್ಯುತ್ತಮವಾಗಿ ಮೂಡಿ ಬಂದವು. ಇದರೊಂದಿಗೆ ಇತರ ಕಾರ್ಯಕ್ರಮಗಳು ಗಮನ ಸೆಳೆದವು.
ತೀರ್ಥೋದ್ಭವ ಕಣ್ತುಂಬಿಕೊAಡ ಪ್ರೇಕ್ಷಕರು
ಸಂಜೆ ವೇಳೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿ ವತಿಯಿಂದ ಬೃಹತ್ ಪರದೆಯಲ್ಲಿ ತೀರ್ಥೋದ್ಭವದ ನೇರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಶಾಂತಳ್ಳಿಯ ಬಿ.ಎ. ಗಣೇಶ್ ತಂಡದವರಿAದ ಸುಗಮ ಸಂಗೀತ ಕಾರ್ಯಕ್ರಮ ಮೂಡಿಬರುತ್ತಿದ್ದ ಸಂದರ್ಭ ಸಾಂಸ್ಕೃತಿಕ ಸಮಿತಿಯ ಕೋರಿಕೆ ಮೇರೆಗೆ ಗಣೇಶ್ ಅವರು ‘ತಲಕಾವೇರಿಗೆ ಹೋಗೋಣ...’ ಎಂಬ ಹಾಡನ್ನು ಹಾಡಿ ಮುಗಿಸುತ್ತಿದ್ದಂತೆ ಪುಣ್ಯ ಕ್ಷೇತ್ರ ತಲಕಾವೇರಿಯ ಕುಂಡಿಕೆಯಲ್ಲಿ ಕಾವೇರಿ ಮಾತೆ ಪವಿತ್ರ ತೀರ್ಥರೂಪಿಣಿಯಾಗಿ ಆವೀರ್ಭವಿಸಿದಳು. ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಕಾವೇರಿ ಮಾತೆಗೆ ಜೈಕಾರದೊಂದಿಗೆ ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದ ಘೋಷಣೆ ಮೊಳಗಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.