ಗೋಣಿಕೊಪ್ಪಲು, ಅ. ೧೮: ವರ್ಷದಲ್ಲಿ ಸಾಧಾರಣವಾಗಿ ಮೇ ತಿಂಗಳ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಹಾಗೂ ಗ್ರಾ.ಪಂ.ಟ್ಯಾAಕರ್ ಮೂಲಕ ನೀರು ಸರಬರಾಜು ಮಾಡುವದು ಸಾಮಾನ್ಯವಾಗಿತ್ತು. ಈ ಬಾರಿಯ ಮಳೆ ನೀರಿನ ಕೊರತೆ ಗೋಣಿಕೊಪ್ಪಲಿನಲ್ಲಿ ಅಂತರ್ಜಲದ ಮಟ್ಟ ತೀವ್ರ ಕುಸಿತ ಕಾಣಲು ಕಾರಣವಾಗಿದೆ. ಗೋಣಿಕೊಪ್ಪಲಿನ ೮ನೇ ವಾರ್ಡಿನಲ್ಲಿ ಕಳೆದ ಎರಡು ವಾರಗಳಿಂದ ನಲ್ಲಿಗಳಲ್ಲಿ ನೀರು ಹರಿಯುವದು ನಿಂತಿದೆ.

ಅಕ್ಟೋಬರ್ ತಿಂಗಳಿನಲ್ಲಿಯೇ ಗೋಣಿಕೊಪ್ಪಲು ಹಲವು ಬಡಾವಣೆಗಳಲ್ಲಿ ಜಲಕ್ಷಾಮ ಎದುರಾಗಿದ್ದು ಕೊಳವೆ ಬಾವಿಗಳನ್ನೇ ಆಶ್ರಯಿಸಿರುವ ಗ್ರಾ.ಪಂ. ಇದೀಗ ಸಾರ್ವಜನಿಕರಿಗೆ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯನ್ನು ಬೇಸಿಗೆಗೆ ೬ ತಿಂಗಳಿರುವಾಗಲೇ ಎದುರಿಸುತ್ತಿದೆ.

ಗೋಣಿಕೊಪ್ಪಲಿನ ೧ನೇ ವಾರ್ಡ್, ೩,೫,೬ ಹಾಗೂ ೮ನೇ ವಾರ್ಡ್ನಲ್ಲಿ ತುರ್ತು ನೂತನ ಕೊಳವೆ ಬಾವಿ ತೆಗೆಯುವ ಅಗತ್ಯ ಕಂಡುಬAದಿದೆ.

ಜಲಕ್ಷಾಮದ ನಡುವೆ ಇಲ್ಲಿನ ಮೂರನೇ ವಾರ್ಡ್ನಲ್ಲಿ ನೀರು ದಿನನಿತ್ಯವೂ ಪೋಲಾಗುತ್ತಿದೆ ಎಂದು ಕೆಲವು ಗ್ರಾ.ಪಂ. ಸದಸ್ಯರೇ ಆರೋಪಿಸಿದ್ದಾರೆ. ಬೇರೆಲ್ಲಾ ವಾರ್ಡ್ಗಳಿಗೆ ಎರಡು ಮೂರು ದಿನಕ್ಕೊಮ್ಮೆ ನೀರು ಸರಬರಾಜು, ಮೂರನೇ ವಾರ್ಡ್ಗೆ ಮಾತ್ರ ದಿನವೂ ನೀರು ಬಿಡುತ್ತಿರುವ ಕ್ರಮ ಟೀಕೆಗೆ ಗುರಿಯಾಗಿದೆ. ಮೂರನೇ ವಾರ್ಡ್ಗೂ ಎರಡು ದಿನಕ್ಕೊಮ್ಮೆ ನೀರು ಹರಿಸಿ ಹೆಚ್ಚುವರಿ ನೀರನ್ನು ಮುಖ್ಯ ಟ್ಯಾಂಕ್‌ಗೆ ಹರಿಸಿದ್ದಲ್ಲಿ ೮ ಹಾಗೂ ಇತರೆ ಬಡಾವಣೆಗಳಿಗೂ ನೀರು ಸರಬರಾಜು ಮಾಡಲು ಅವಕಾಶವಿದೆ ಎನ್ನಲಾಗಿದೆ.

ಕಕ್ಕಟ್ಟುಕೊಂಗಣ ಯೋಜನೆ ನೆನೆಗುದಿಗೆ!?

ವೀರಾಜಪೇಟೆ ಪುರಸಭೆಗೆ ಬೇತ್ರಿ ಕಾವೇರಿ ಹೊಳೆಯಿಂದ ಕುಡಿಯುವ ನೀರು ಸರಬರಾಜು ಮಾಡುವಂತೆ, ಕೇರಳಕ್ಕೆ ಹರಿದುಹೋಗುತ್ತಿರುವ ಬರಪೊಳೆ, ಕಕ್ಕಟ್ಟುಕೊಂಗಣ ಹೊಳೆ ನೀರಾವರಿ ಯೋಜನೆ ಅನುಷ್ಠಾನಗೊಂಡಲ್ಲಿ ದಕ್ಷಿಣ ಕೊಡಗಿನ ಸುಮಾರು ೨೦ ಗ್ರಾ.ಪಂ.ಗಳಿಗೆ ಶಾಶ್ವತ ಕುಡಿಯುವ ನೀರು ಸಿಗಲಿದ್ದು ಈ ಬಗ್ಗೆ ಶಾಸಕರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ತುರ್ತು ಸಭೆ ಕರೆದು ಯೋಜನೆ ರೂಪಿಸುವ ಒತ್ತಾಯವೂ ಕೇಳಿ ಬಂದಿದೆ.

೬ ಕೊಳವೆ ಬಾವಿ ತುರ್ತು ಅಗತ್ಯ ಗೋಣಿಕೊಪ್ಪಲಿನಲ್ಲಿ ತಾ. ೧೪ ರಂದು ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ ನಡೆದು ತುರ್ತು ನೀರಿನ ಅಭಾವ ಶಮನಕ್ಕೆ ಒಟ್ಟು ೬ ಕೊಳವೆ ಬಾವಿ ತೆಗೆಸಲು ಹಾಗೂ ಅನುದಾನದ ಬಗ್ಗೆ ಚರ್ಚೆ ನಡೆಯಿತು.

ತೀವ್ರ ನೀರಿನ ಕ್ಷಾಮ ಇರುವ ೬ನೇ ವಾರ್ಡ್ನಲ್ಲಿ ಎರಡು ನೂತನ ಕೊಳವೆ ಬಾವಿ ಅಗತ್ಯದ ಬಗ್ಗೆಯೂ ಚರ್ಚೆ ನಡೆಯಿತು. ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ಗಣೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಗೋಣಿಕೊಪ್ಪಲು ಕುಡಿಯುವ ನೀರಿನ ಅಭಾವದ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಸಭೆಯಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆ ತಾಲೂಕು ಸಂಯೋಜಕರಾದ ಸತೀಶ್, ವಿಬಿಜಿರಾಮ್‌ಜಿ ಯೋಜನೆಯ ಅಭಿಯಂತರ ಹೇಮಂತ್ ಹಾಗೂ ಗ್ರಾ.ಪಂ. ಆಡಳಿತಾಧಿಕಾರಿ ತಿಮ್ಮಯ್ಯ ಅವರ ಸಮ್ಮುಖದಲ್ಲಿ ಗ್ರಾ.ಪಂ. ಕಾಮಗಾರಿಗಳ ಪಟ್ಟಿ ಹಾಗೂ ಪಾರದರ್ಶಕತೆಯ ಬಗ್ಗೆ ವಿವರಿಸಲಾಯಿತು.

ಸಭೆಯಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಚೈತ್ರಾ ಚೇತನ್, ಕೆ.ರಾಜೇಶ್, ಪುಷ್ಪಾ ಮನೋಜ್, ಮಾಜಿ ಸದಸ್ಯ ಹಕೀಮ್, ರಾಮಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.

ಇದೇ ಸಂದರ್ಭ ಒಂದು ತಿಂಗಳ ಅವಧಿಯೊಳಗೆ ನೂತನ ಕೊಳವೆ ಬಾವಿ ಕೊರೆಸುವ ಮೂಲಕ ಬೇಸಿಗೆಯಲ್ಲಿ ನೀರಿನ ಬವಣೆ ಸುಧಾರಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.