ಪೊನ್ನಂಪೇಟೆ, ಅ. ೧೮: ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ೨೦೨೬-೨೭ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಪಾಂಡAಡ ಕೆ. ಮಂದಣ್ಣ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ನಂತರ ಮಾತನಾಡಿದ ಅವರು, ಕಾಲೇಜು ಶಿಕ್ಷಣವು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಶ್ರದ್ಧೆ, ಬದ್ಧತೆ ಮತ್ತು ಪರಿಶ್ರಮದಿಂದ ಮುನ್ನಡೆಯಬೇಕು. ಮೊಬೈಲ್ ಬಳಕೆಯ ಸಮಯವನ್ನು ಕಡಿಮೆ ಮಾಡಿ, ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಲೇಜಿನ ವಿದ್ಯಾರ್ಥಿಗಳು ಹಾಕಿ, ಫುಟ್‌ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಇನ್ನೋರ್ವ ಅತಿಥಿ ಕಾವೇರಿ ಎಜುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ ಮಾತನಾಡಿ, ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಮತ್ತು ಯಶಸ್ಸನ್ನು ಸಾಧಿಸಲು ಸ್ಪಷ್ಟ ಗುರಿ ಹಾಗೂ ದೃಢವಾದ ನಿರ್ಧಾರ ಅತ್ಯಗತ್ಯ. ಹಠ ತೊಟ್ಟು ಮನಸ್ಸಿನಲ್ಲಿ ದೃಢ ನಿರ್ಧಾರ ಕೈಗೊಂಡರೆ ಎಂತಹ ಉನ್ನತ ಮಟ್ಟಕ್ಕೂ ಏರಬಹುದು. ಕೇವಲ ತರಗತಿ ಕೊಠಡಿಯ ವಿದ್ಯಾಭ್ಯಾಸಕ್ಕೆ ಸೀಮಿತವಾಗದೆ, ಕ್ರೀಡೆ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಎನ್‌ಸಿಸಿ, ಎನ್‌ಎಸ್‌ಎಸ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ವಿತರಿಸಿ ಶುಭಕೋರಿದರು. ಇದೇ ಸಂದರ್ಭ ಪ್ರೊ. ಪಾಂಡAಡ ಕೆ. ಮಂದಣ್ಣ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮಗಳು ರಂಜಿಸಿದವು.

ಈ ಸಂದರ್ಭ ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಯೋಜಕರಾದ ಕವಿತಾ ಕೆ.ಎ., ರೀತಾ ಎನ್.ಪಿ., ಐಕ್ಯೂಎಸಿ ಸಂಯೋಜಕಿ ಡಾ. ನಯನ ತಮ್ಮಯ್ಯ, ಸೊಸೈಟಿ ನಿರ್ದೇಶಕ ಪಿ.ಟಿ. ಸುಭಾಷ್ ಸುಬ್ಬಯ್ಯ, ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್.ಎಸ್. ಮಾದಯ್ಯ, ಕನ್ನಡ ಪ್ರಾಧ್ಯಾಪಕಿ ಡಾ. ಎಂ.ಪಿ. ರೇಖಾ ವಸಂತ್, ಕಚೇರಿ ಅಧೀಕ್ಷಕಿ ಟಿ.ಕೆ. ಲತಾ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಬೆಳ್ಳಿಯಪ್ಪ ಟಿ.ಪಿ., ಬೆಳ್ಳಿಯಪ್ಪ ಎಂ.ಜಿ., ಪ್ರಿನ್ಸಿ ದೇವಮ್ಮ ಎಂ.ಪಿ., ಸುರಕ್ಷಾ ವಿ.ಎಸ್., ಪೊನ್ನಣ್ಣ ಸಿ.ಎಸ್., ನಿಥಿನ್ ಬೋಪಣ್ಣ ಕೆ.ಬಿ., ರೋನಿಕಾ ಕೆ.ಎನ್., ಉಪನ್ಯಾಸಕರು ಹಾಗೂ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.