ಸುಂಟಿಕೊಪ್ಪ, ಅ. ೧೮: ಕೊಡಗು ಮೆಡ್ ಸಿಟಿ (ಕೆಎಂಸಿ) ಆಸ್ಪತ್ರೆಯ ೨ನೇ ವಾರ್ಷಿಕೋತ್ಸವದ ಅಂಗವಾಗಿ, ನಮ್ಮ ಸುಂಟಿಕೊಪ್ಪ ಬಳಗ ಕೆಎಂಸಿ ಆಸ್ಪತ್ರೆಹಾಗೂ ಮೈಸೂರಿನ ಭಾರತ್ ಹಾಸ್ಪಿಟಲ್ ಅಂಡ್ ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಜಂಟಿ ಆಶ್ರಯದಲ್ಲಿ ನಡೆದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭ ಶಿಬಿರದಲ್ಲಿ ಮೈಸೂರು ಭಾರತ್ ಹಾಸ್ಪಿಟಲ್ ಐ.ಪಿ.ಡಿ ವಿಭಾಗದ ತಜ್ಞೆ ಡಾ. ಅನುಷಾ ಮಾತನಾಡಿ, ಸಾರ್ವಜನಿಕರಿಗೆ ಬಾಯಿ ಕ್ಯಾನ್ಸರ್, ಶ್ವಾಸಕೋಶ, ಗರ್ಭಕಂಠ, ಸ್ತನ, ಹೊಟ್ಟೆ ಹಾಗೂ ರಕ್ತ ಸಂಬAಧಿತ ಕ್ಯಾನ್ಸರ್ ರೋಗಗಳ ಬಗ್ಗೆ ಮಾಹಿತಿ ನೀಡಿ ಆರಂಭಿಕ ಪತ್ತೆಯಿಂದ ಕ್ಯಾನ್ಸರ್ ತಡೆ ಸಾಧ್ಯ ಎಂದು ಜಾಗೃತಿ ಮೂಡಿಸಿದರು.
ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದ್ದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಚ್ಪಿವಿ ಲಸಿಕೆ ಲಭ್ಯವಿದ್ದು, ಮುನ್ನೆಚ್ಚರಿಕೆಯಾಗಿ ಲಸಿಕೆ ಪಡೆದುಕೊಳ್ಳಬಹುದು. ಜನರು ಕ್ಯಾನ್ಸರ್ ಎಂದರೆ ಭಯಪಡದೆ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ಮುಕ್ತ ಹಾಗೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕೆಂದು ಡಾ. ಅನುಷಾ ಕರೆ ನೀಡಿದರು. ಈ ಸಂದರ್ಭ ಡಾ. ನದೀಮ್, ಕೆ.ಎಂ.ಸಿ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ನಿಯಾಜ್, ನಮ್ಮ ಸುಂಟಿಕೊಪ್ಪ ಬಳಗದ ಅನಿಲ್ ಕುಮಾರ್, ಸುಹೈಲ್ ಹಾಗೂ ಕೆ.ಎಸ್. ಹನೀಫ್ ಉಪಸ್ಥಿತರಿದ್ದರು.