ಭಾಗಮಂಡಲ, ಅ. ೧೭: ಮಂಜಿನ ಮುಸುಕಿನ ಬೆಟ್ಟಗಳು, ಹಸಿರಿನ ಹೊದಿಕೆ ಹೊದ್ದ ಕೊಡಗಿನ ಪ್ರಕೃತಿ ಸೊಬಗು, ಭಕ್ತಿಯ ನಿನಾದ ಮೊಳಗಿಸುವ ತಲಕಾವೇರಿಯ ಪವಿತ್ರ ಸನ್ನಿಧಿ... ಇವೆಲ್ಲದರ ನಡುವೆ ಕಾವೇರಿ ಮಾತೆಯ ಆಗಮನದ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ಭಕ್ತರ ನಿರೀಕ್ಷೆ ಸಾಕಾರಗೊಂಡಿತು. ಕಾವೇರಿಯ ಉಗಮಸ್ಥಾನ, ನಾಡಿನ ಕೋಟ್ಯಂತರ ಜನರ ಆರಾಧ್ಯ ದೈವ ಹಾಗೂ ಕೊಡವರ ಕುಲದೈವದ ನೆಲೆಯಾದ ತಲಕಾವೇರಿಯಲ್ಲಿ ಶನಿವಾರ ಸಂಜೆ ನಿಗದಿತ ಸಮಯ ೭.೫೦ಕ್ಕೆ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಘಟಿಸಿತು. ತೀರ್ಥರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತು.
ಕಾವೇರಿ ಮಾತೆಯ ದರ್ಶನ ಪಡೆಯಲು ಸಹಸ್ರಾರು ಭಕ್ತರು ತಲಕಾವೇರಿಗೆ ಆಗಮಿಸಿದ್ದರು. ತೀರ್ಥೋದ್ಭವದ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದ ದೃಶ್ಯ ಕಂಡುಬAತು. ಶುಭ ಮುಹೂರ್ತದಲ್ಲಿ ತೀರ್ಥೋದ್ಭವ ಸಂಭವಿಸುತ್ತಿದ್ದAತೆ ಕಾವೇರಿ ಮಾತೆಗೆ ಜಯಘೋಷ ಮೊಳಗಿತು. ಭಕ್ತರ ಕಂಠದಿAದ ಹೊರಹೊಮ್ಮಿದ 'ಕಾವೇರಿ ಮಾತೆಗೆ ಜಯವಾಗಲಿ', 'ಕಾವೇರಿ ಮಾತಾ ಕಿ ಜೈ' ಎಂಬ ಘೋಷಣೆಗಳು ತಲಕಾವೇರಿಯ ಬೆಟ್ಟಗುಡ್ಡಗಳಲ್ಲಿ ಪ್ರತಿಧ್ವನಿಸಿದವು.
ಧಾರ್ಮಿಕ ಕಾರ್ಯ
ಬೆಳಿಗ್ಗಿನಿಂದಲೇ ಪೌರೋಹಿತ್ಯ ತಂಡದಿAದ ಧಾರ್ಮಿಕ ಕಾರ್ಯಗಳು ತಲಕಾವೇರಿಯಲ್ಲಿ ಆರಂಭಗೊAಡವು. ಪ್ರಧಾನ ಆರ್ಚಕ ಪ್ರಶಾಂತ್ ಆಚಾರ್ ನೇತೃತ್ವದ ವೈದಿಕ ತಂಡದಿAದ ಧಾರ್ಮಿಕ ಕಾರ್ಯಗಳು ನೆರವೇರಿದವು. ಅರ್ಚಕರು ಕುಂಡಿಕೆ ಬಳಿ ಆಗಮಿಸಿ ಕೊಳಕ್ಕಿಳಿದು ಸ್ನಾನ ಮಾಡಿ ಕಾವೇರಿಗೆ ನಮಿಸಿ ಶುಭ್ರಗೊಂಡು ವಾಪಾಸ್ ಕುಂಡಿಕೆಯತ್ತ ಬಂದು ವೇದ ಮಂತ್ರ ಘೋಷಗಳ ಪಠಣದೊಂದಿಗೆ ಕಾವೇರಿಯ ಸ್ವಾಗತಕ್ಕೆ ಸಜ್ಜಾದರು. ಕುಂಕುಮಾರ್ಚನೆ, ತೀರ್ಥ ಪೂಜೆಗಳ ಬಳಿಕ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಹಾಪೂಜೆ ಕೈಗೊಂಡರು. ಕುಂಡಿಕೆಯಿAದ ಕಾವೇರಿ ಉಕ್ಕಿ ಬರುತ್ತಿದಂತೆ ಮೊದಲು ಬ್ರಹ್ಮನಿಗೆ ತೀರ್ಥ ಅರ್ಪಣೆಗೈಯಲಾಯಿತು. ಬೆಳ್ಳಿ ಬಿಂದಿಗೆಯಲ್ಲಿ ಭಗಂಡೇಶ್ವರನಿಗಾಗಿ ತೀರ್ಥವನ್ನು ನೀಡಿ ಅಭಿಷೇಕಕ್ಕೆ ಕೊಂಡೊಯ್ದ ತಕ್ಷಣ ಭಕ್ತರತ್ತ ಅರ್ಚಕ ತಂಡದವರು ತೀರ್ಥವನ್ನು ಪ್ರೋಕ್ಷಿಸಿದರು.
ಭಕ್ತಿಭಾವದ ಹೊನಲು
ಬ್ರಹ್ಮಗಿರಿ ಶಿಖರ ಸಾಲಿನ ನಡುವೆ ನೆಲೆಸಿರುವ ಪವಿತ್ರ ಶ್ರೀ ಕ್ಷೇತ್ರ ತಲಕಾವೇರಿಯ ಸನ್ನಿಧಿಯಲ್ಲಿ ಲೋಕಕಲ್ಯಾಣಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಮೂಲಕ ಭಕ್ತ ಸಮೂಹವನ್ನು ಪುನೀತಗೊಳಿಸಿದಳು.
ವರ್ಷಂಪ್ರತಿಯAತೆ ಈ ಬಾರಿಯೂ ಭಕ್ತರು ಶ್ರೀಮಾತೆಯನ್ನು ಅಪಾರ ಭಕ್ತಿಭಾವದಿಂದ ಬರಮಾಡಿಕೊಂಡರು. ‘ಜೈ ಜೈ ಮಾತಾ... ಕಾವೇರಿ ಮಾತಾ...’, ‘ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ...’, ‘ಕಾವೇರಿ ಬಾಳೊ, ಉಕ್ಕಿ ಬಾ, ಹರಿದು ಬಾ ಕಾವೇರಿ...’ ಎಂಬ ಜಯಘೋಷಗಳು ಕ್ಷೇತ್ರದಲ್ಲಿ ಮೊಳಗಿದವು.
ಕಾವೇರಮ್ಮನನ್ನು ಆರಾಧಿಸುವ ಭಕ್ತಿಗೀತೆಗಳು, ಭಜನೆಗಳು ಹಾಗೂ ಪುರೋಹಿತರ ತಂಡದಿAದ ನಿರಂತರವಾಗಿ ಮೊಳಗಿದ ಮಂತ್ರಘೋಷಗಳ ಪಠಣ ಇಡೀ ಕ್ಷೇತ್ರವನ್ನು ಅಧ್ಯಾತ್ಮಿಕ ವಾತಾವರಣದಲ್ಲಿ ಮುಳುಗಿಸಿತು. ತೀರ್ಥೋದ್ಭವದ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರು ಭಾವಪರವಶರಾದರು. ಇದರೊಂದಿಗೆ ಕೆ.ನಿಡುಗಣೆಯ ಕರವಲೆ ಭಗವತಿ ತಂಡದಿAದ ಬಾಳೋಪಾಟ್ ಹಾಗೂ ದುಡಿಕೊಟ್ಟ್ ಪಾಟ್ ಮೊಳಗಿದ್ದು, ತಲಕಾವೇರಿಯ ಪವಿತ್ರ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.
ತೀರ್ಥೋದ್ಭವದ ನಿಗದಿತ ಸಮಯ ಸಮೀಪಿಸುತ್ತಿದ್ದಂತೆಯೇ ಭಕ್ತಗಣ ಕಾವೇರಮ್ಮೆಯನ್ನು ಸ್ತುತಿಸುತ್ತಾ ಜಯಘೋಷ ಮೊಳಗಿಸುತ್ತ, ತಾಯಿಯ ಆಗಮನವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು. ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತಿದ್ದಂತೆ ‘ಕಾವೇರಿ ಮಾತೆಗೆ ಜಯ’ ಎಂಬ ಘೋಷಣೆಗಳು ಮತ್ತಷ್ಟು ಗಟ್ಟಿಯಾಗಿ ಮೊಳಗಿದವು.
ಅರ್ಚಕರ ತಂಡ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಬ್ರಹ್ಮಕುಂಡಿಕೆಗೆ ಅರಿಶಿಣ, ಕುಂಕುಮ ಹಾಗೂ ಪುಷ್ಪಗಳನ್ನು ಅರ್ಪಿಸಿ ವಿಧಿವಿಧಾನ ನೆರವೇರಿಸಿತು. ಬಳಿಕ ಪವಿತ್ರ ಬ್ರಹ್ಮಕುಂಡಿಕೆಯಿAದ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕ್ಷಣ ಭಕ್ತರ ಪಾಲಿಗೆ ಅವಿಸ್ಮರಣೀಯವಾಗಿತ್ತು.
ತೀರ್ಥೋದ್ಭವದ ಪವಿತ್ರ ಕ್ಷಣದ ಬಳಿಕ ಕಾವೇರಿ ತೀರ್ಥವನ್ನು ಪಡೆಯಲು ಭಕ್ತರು ಮುಗಿಬಿದ್ದರು. ಬ್ರಹ್ಮಕುಂಡಿಕೆಯ ಸುತ್ತಲೂ ಪವಿತ್ರ ತೀರ್ಥವನ್ನು ಪಡೆದು ಮನೆಗೆ ಕೊಂಡೊಯ್ಯಲು ಭಕ್ತರ ದಂಡೇ ನೆರೆದಿತ್ತು.
ಭಕ್ತರ ಸುಗಮ ಸಂಚಾರಕ್ಕಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸರತಿ ಸಾಲಿನಲ್ಲಿ ತೆರಳುವ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಕಾಲ ತಳ್ಳಾಟ- ನೂಕುನುಗ್ಗಲು ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಭಕ್ತರನ್ನು ಸರತಿ ಸಾಲಿನಲ್ಲಿ ಕಳುಹಿಸಿದರು.
ಗಂಟೆಗಟ್ಟಲೆ ಕಾದುನಿಂತಿದ್ದ ಭಕ್ತರು ಕೊನೆಗೂ ಕಾವೇರಿ ತೀರ್ಥವನ್ನು ಪಡೆದು, ಅದನ್ನು ಪವಿತ್ರ ಪ್ರಸಾದವೆಂಬ ಭಾವನೆಯೊಂದಿಗೆ ತಮ್ಮ ಮನೆಗಳಿಗೆ ಕೊಂಡೊಯ್ದರು. ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಮ್ಮೆಯನ್ನು ಕಣ್ತುಂಬಿಕೊAಡು, ಪವಿತ್ರ ತೀರ್ಥವನ್ನು ಸ್ವೀಕರಿಸಿದ ಭಕ್ತರ ಮುಖದಲ್ಲಿ ಧನ್ಯತೆಯ ಭಾವ ಎದ್ದು ಕಾಣಿಸಿತು.
ಕಂಗೊಳಿಸುತ್ತಿದ್ದ ಕ್ಷೇತ್ರ
ಜಿಲ್ಲಾಡಳಿತ, ಪೊಲೀಸ್ ಇಲಾಖೆ ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಿದ್ದರೆ, ಅತ್ತ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯದ ಮೂಲಕ ಎಲ್ಲಾ ರೀತಿಯ ಧಾರ್ಮಿಕ ವಿಧಿ - ವಿಧಾನಗಳ ಪಾಲನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.
ಭಗಂಡೇಶ್ವರ ಕ್ಷೇತ್ರ ಹಾಗೂ ತಲಕಾವೇರಿ ಸನ್ನಿಧಿ ವಿದ್ಯುತ್ ಬೆಳಕು, ಹೂವಿನ ಅಲಂಕಾರದೊAದಿಗೆ ಕಂಗೊಳಿಸುತ್ತಿತ್ತು. ಭಾಗಮಂಡಲದಿAದ - ತಲಕಾವೇರಿ ಮಾರ್ಗದಲ್ಲಿಯೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
-ವರದಿ : ಹೆಚ್.ಜೆ. ರಾಕೇಶ್, ಚಿತ್ರ : ಸುನಿಲ್, ಲೋಕೇಶ್ ಕಾಟಕೇರಿ, ಕರುಣ್ ಕಾಳಯ್ಯ.