(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಅ. ೧೭: ರಾಜ್ಯಾದ್ಯಂತ ಅವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಆರು ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಿಸಿದ್ದರು.ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಆಡಳಿತಾಧಿಕಾರಿಗಳ ಅವಧಿ ಕೂಡ ಮುಕ್ತಾಯಗೊಳ್ಳುತ್ತಿತ್ತು.ಇದೀಗ ಸರ್ಕಾರ ಆಡಳಿತಾಧಿಕಾರಿಗಳ ಅವಧಿಯನ್ನು, ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩’ ರ ಪ್ರಕರಣ ೩೨೧ರ ಅನ್ವಯ ಸರ್ಕಾರಕ್ಕಿರುವ ಅಧಿಕಾರವನ್ನು ಚಲಾಯಿಸಿ, ಇದೇ ಕಾಯ್ದೆಯ ಪ್ರಕರಣ ೮ (೨)ರ ಪ್ರಕಾರ ಅಧಿಕಾರಾವಧಿಯನ್ನು ಮತ್ತೆ ೬ ತಿಂಗಳು ಮುಂದುವರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಕೆ.ಎಚ್ ಅವರು ಆದೇಶಕ್ಕೆ ಅನುಮೋದನೆ ನೀಡಿ ಸುತ್ತೋಲೆ ಹೊರಡಿಸಿ, ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದಾಗಿ ಮುಂದಿನ ಆರು ತಿಂಗಳ ಕಾಲ ಗ್ರಾಮ ಪಂಚಾಯತ್ ಚುನಾವಣೆಗಳು ನಡೆಯುವುದು ಅನುಮಾನವಾಗಿದೆ. ಮುಂದಿನ ಆರು ತಿಂಗಳವರೆಗೆ ಗ್ರಾ.ಪಂಗಳಲ್ಲಿ ಅಧಿಕಾರಿಗಳದ್ದೇ ರಾಜ್ಯಭಾರ!
ಕೊಡಗು ಜಿಲ್ಲೆಯಲ್ಲಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯತ್ ಹೊರತುಪಡಿಸಿ ಈಗಾಗಲೇ ಜನಪ್ರತಿನಿಧಿಗಳ ಆಡಳಿತಾವಧಿ ಮುಕ್ತಾಯಗೊಂಡಿರುವ ೧೦೧ ಗ್ರಾಮ ಪಂಚಾಯಿತಿಗಳಿಗೆ ವಾರ್ಡ್ವಾರು ಮೀಸಲು ಪಟ್ಟಿಯನ್ನು ಜಿಲ್ಲಾಧಿಕಾರಿ ಕಳೆದ ತಿಂಗಳು ಪ್ರಕಟಿಸಿದ್ದರು. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯನ್ನು ಒಂದೇ ಬಾರಿ ನಡೆಸಲು ಸರ್ಕಾರ ಮೊದಲು ಸಿದ್ಧತೆ ನಡೆಸಿದ್ದರು. ಆದರೆ ಇತ್ತೀಚೆಗೆ ಸರ್ಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ಮೊದಲು ನಡೆಸಲು ತೀರ್ಮಾನಿಸಿ ಕ್ಷೇತ್ರವಾರು ಮೀಸಲು ಪಟ್ಟಿಯನ್ನು ಕೂಡ ಪ್ರಕಟಿಸಿದೆ.
ಗ್ರಾಮ ಪಂಚಾಯತ್ ಚುನಾವಣೆ ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ನಡೆಯವುದು ಅನುಮಾನವಾಗಿದೆ. ೨೦೨೭ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿಗೆ ಗ್ರಾ.ಪಂ ಜನಪ್ರತಿನಿಧಿಗಳ ಆಡಳಿತಾವಧಿ ಮುಗಿದು ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಹಿಂದೆ ೨೦೨೦ರಲ್ಲಿ ಕೂಡ ಗ್ರಾ.ಪಂಗಳಿಗೆ ಆಡಳಿತಾಧಿಕಾರಿಗಳ ನೇಮಕವಾಗಿತ್ತು. ೨೦೨೦ರಲ್ಲಿ ಕೋವಿಡ್ ಕಾರಣದಿಂದಾಗಿ ಚುನಾವಣೆ ಮುಂದೂಡಲಾಗಿತ್ತು. ೨೦೨೦ ಡಿಸೆಂಬರ್ ತಿಂಗಳ ೨೭ರಂದು ಗ್ರಾ.ಪಂ ಗಳಿಗೆ ಚುನಾವಣೆ ನಡೆದು ೩೦ ರಂದು ಫಲಿತಾಂಶ ಪ್ರಕಟಗೊಂಡಿತ್ತು.ವಾರ್ಡ್ ವಾರು ಮೀಸಲು ಪಟ್ಟಿ ಪ್ರಕಟಗೊಂಡಿದ್ದರೂ ಕೂಡ ಸರ್ಕಾರ ಚುನಾವಣೆ ನಡೆಸಲು ಒಲವು ತೋರದೆ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ನೇಮಕವಾಗಿರುವ ಆಡಳಿತಾಧಿಕಾರಿಗಳ ಅವಧಿಯನ್ನು ಮತ್ತೆ ಆರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.