ಕುಶಾಲನಗರ, ಅ. ೧೬: ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ಕುಶಾಲನಗರ ತಾಲೂಕಿಗೆ ಆಗಿರುವ ಅನ್ಯಾಯದ ಕುರಿತು ಆಕ್ಷೇಪಣೆ ಸಲ್ಲಿಸಿ, ಮೀಸಲಾತಿ ಪಟ್ಟಿಯನ್ನು ಮರು ಪರಿಶೀಲಿಸುವಂತೆ ಸ್ಥಳೀಯ ಬಿಜೆಪಿ ಪ್ರಮುಖರು ಕುಶಾಲನಗರ ತಾಲೂಕು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿಯ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ಪರಿಶೀಲಿಸಿದಾಗ, ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ಕುಶಾಲನಗರ ತಾಲೂಕಿಗೆ ಅನ್ಯಾಯವಾಗಿರುವ ಕುರಿತು ಗಂಭೀರ ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ.
ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಹಾಗೂ ತಾಲೂಕುಗಳಿಗೆ ನ್ಯಾಯಸಮ್ಮತ ಅವಕಾಶ ಕಲ್ಪಿಸಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಹಿನ್ನೆಲೆಯಲ್ಲಿ ಪ್ರಸ್ತುತ ಮೀಸಲಾತಿ ಪಟ್ಟಿಯ ಕುರಿತು ಕೆಳಕಂಡ ಆಕ್ಷೇಪಣೆಗಳನ್ನು ಸಲ್ಲಿಸಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಅನ್ಯಾಯ
ಪ್ರಸ್ತುತ ಮೀಸಲಾತಿ ಪಟ್ಟಿಯ ಪ್ರಕಾರ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಕೇವಲ ೨ ಸಾಮಾನ್ಯ ಕ್ಷೇತ್ರಗಳನ್ನು ನೀಡಲಾಗಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ೬ ಸಾಮಾನ್ಯ ಕ್ಷೇತ್ರಗಳನ್ನು ನೀಡಲಾಗಿದೆ. ಅದೇ ರೀತಿ, ಮಹಿಳಾ ಮೀಸಲಾತಿಯ ಹಂಚಿಕೆಯಲ್ಲಿಯೂ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಕ್ಷೇತ್ರಗಳನ್ನು ಮಹಿಳಾ ಮೀಸಲಾತಿಗೆ ಒಳಪಡಿಸಿರುವುದರಿಂದ, ಸಾಮಾನ್ಯ ವರ್ಗದಡಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳಿಗೆ ಲಭ್ಯವಿರುವ ಅವಕಾಶಗಳು ಸೀಮಿತವಾಗಿವೆ ಎಂಬ ಆತಂಕ ಮೂಡಿದೆ. ಮಹಿಳಾ ಮೀಸಲಾತಿಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಮೀಸಲಾತಿ ಹಂಚಿಕೆಯು ಅನ್ವಯಿಸುವ ನಿಯಮಗಳು, ಕ್ಷೇತ್ರಗಳ ವರ್ಗೀಕರಣ ಮತ್ತು ಹಿಂದಿನ ಮೀಸಲಾತಿ ಕ್ರಮಗಳಿಗೆ ಅನುಗುಣವಾಗಿ ನ್ಯಾಯಸಮ್ಮತವಾಗಿ ನಡೆದಿದೆಯೇ ಎಂಬುದನ್ನು ಪರಿಶೀಲಿ ಸುವುದು ಅತ್ಯಗತ್ಯ.
ಕುಶಾಲನಗರ ತಾಲೂಕಿನ ಸಂಪೂರ್ಣ ನಿರ್ಲಕ್ಷö್ಯ
ತಾಲೂಕುವಾರು ಮೀಸಲಾತಿ ಹಂಚಿಕೆಯನ್ನು ಗಮನಿಸಿದಾಗ ಕುಶಾಲನಗರ ತಾಲೂಕಿಗೆ ತೀವ್ರ ಅನ್ಯಾಯವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ನಮಗೆ ಲಭ್ಯವಿರುವ ಮೀಸಲಾತಿ ಪಟ್ಟಿಯ ಮಾಹಿತಿಯ ಪ್ರಕಾರ: ಮಡಿಕೇರಿ ತಾಲೂಕು: ೨ ಸಾಮಾನ್ಯ ಮತ್ತು ೨ ಮಹಿಳಾ ಸಾಮಾನ್ಯ ಕ್ಷೇತ್ರಗಳು. ವೀರಾಜಪೇಟೆ ತಾಲೂಕು: ೧ ಸಾಮಾನ್ಯ ಮತ್ತು ೨ ಮಹಿಳಾ ಸಾಮಾನ್ಯ ಕ್ಷೇತ್ರಗಳು. ಪೊನ್ನಂಪೇಟೆ ತಾಲೂಕು: ೩ ಸಾಮಾನ್ಯ ಕ್ಷೇತ್ರಗಳು. ಸೋಮವಾರಪೇಟೆ ತಾಲೂಕು ಸಾಮಾನ್ಯ ಮತ್ತು ೨ ಮಹಿಳಾ ಸಾಮಾನ್ಯ ಕ್ಷೇತ್ರಗಳು. ಕುಶಾಲನಗರ ತಾಲೂಕು: ಕೇವಲ ೧ ಮಹಿಳಾ ಸಾಮಾನ್ಯ ಕ್ಷೇತ್ರ. ಇತರ ತಾಲೂಕುಗಳಿಗೆ ಹೋಲಿಸಿದರೆ ಕುಶಾಲನಗರ ತಾಲೂಕಿಗೆ ಸಾಮಾನ್ಯ ಕ್ಷೇತ್ರಗಳ ಅವಕಾಶ ದೊರೆಯದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕುಶಾಲನಗರ ತಾಲೂಕಿನ ಜನಸಂಖ್ಯೆ, ಭೌಗೋಳಿಕ ವ್ಯಾಪ್ತಿ, ಸ್ಥಳೀಯ ಪ್ರಾತಿನಿಧ್ಯದ ಅಗತ್ಯ ಮತ್ತು ಅನ್ವಯಿಸುವ ಮೀಸಲಾತಿ ನಿಯಮಗಳನ್ನು ಪರಿಗಣಿಸಿ ಈ ಹಂಚಿಕೆ ಮಾಡಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಯಾವುದೇ ತಾಲೂಕಿನ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಮಾನ ಅವಕಾಶವನ್ನು ಅನಗತ್ಯವಾಗಿ ಕುಗ್ಗಿಸುವಂತಾಗಬಾರದು.
ಕಳೆದ ೨೦ ವರ್ಷಗಳ ಮೀಸಲಾತಿ ಪುನರಾವರ್ತನೆಯ ಕುರಿತು ಅನುಮಾನ ಇದ್ದಂತಿದೆ ಎಂದು ತಿಳಿಸಿದ್ದಾರೆ. ಕಳೆದ ಸುಮಾರು ೨೦ ವರ್ಷಗಳ ಅವಧಿಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಮೀಸಲಾತಿ ವಿವರಗಳನ್ನು ಪರಿಶೀಲಿಸಿದಾಗ, ಕೆಲವು ಕ್ಷೇತ್ರಗಳಿಗೆ ಪದೇಪದೇ ಸಾಮಾನ್ಯ ವರ್ಗದ ಮೀಸಲಾತಿ ನೀಡಿರುವುದು ಕಂಡುಬರುತ್ತದೆ ಎಂದು ಆಕ್ಷೇಪಣೆ ಸಲ್ಲಿಸಲಾಗುತ್ತಿದೆ.
ಈ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬAಧಪಟ್ಟ ಅಧಿಕೃತ ದಾಖಲೆಗಳ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ಮತ್ತು ಮರುಪರಿಶೀಲನೆ ನಡೆಸಬೇಕು.
ಎಲ್ಲ ಅರ್ಹ ಅಭ್ಯರ್ಥಿಗಳಿಗೂ ಕಾನೂನುಬದ್ಧವಾಗಿ ನ್ಯಾಯಸಮ್ಮತ ಅವಕಾಶ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಕಚೇರಿಗೆ ತೆರಳಿ ಚಂದ್ರಶೇಖರ್ ಹೆರೂರು, ಭಾಸ್ಕರ್ ನಾಯಕ್, ಪ್ರಶಾಂತ್ ಕೆ.ಡಿ., ಮನು ಕೆ.ಜಿ., ಎಂ.ಡಿ. ಕೃಷ್ಣಪ್ಪ, ಮಂಜುನಾಥ್ ಡಿ.ಸಿ., ರಾಮನಾಥನ್, ಸುಮನ್ ಗೌಡ ಆಕ್ಷೇಪಣೆ ಸಲ್ಲಿಸಿದರು.