ವೀರಾಜಪೇಟೆ, ಅ. ೧೫: ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ನೀಡುತ್ತೇವೇಯೋ ಮಾನಸಿಕ ಆರೋಗ್ಯಕ್ಕೂ ಅಷ್ಟೇ ಮಹತ್ವ ನೀಡಿದಾಗ ಪರಿಪೂರ್ಣ ಆರೋಗ್ಯಯುತ ಜೀವನ ನಮ್ಮದಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ವೀರಾಜಪೇಟೆ ನ್ಯಾ. ಎ. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಕಾವೇರಿ ಕಾಲೇಜು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ವೀರಾಜಪೇಟೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಿನವರು ಡಯಟ್, ವ್ಯಾಯಾಮದ ಮೂಲಕ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇದರೊಂದಿಗೆ ಮಾನಸಿಕ ಆರೋಗ್ಯ ಕಾಪಾಡುವ ಕಡೆಯು ಗಮನ ಹರಿಸುವುದು ಅಷ್ಟೇ ಮುಖ್ಯವಾಗಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ಜೀವನ ಹಾಗೂ ಉದ್ಯೋಗಿ ಜೀವನದಲ್ಲಿ ಒತ್ತಡ ಎಂಬುದು ಸರ್ವೆ ಸಾಮಾನ್ಯ. ಒತ್ತಡಕ್ಕೆ ಒಳಗಾಗಿ ಒದ್ದಾಡದೆ, ಮಾನಸಿಕವಾಗಿ ಕುಗ್ಗದೆ, ಒತ್ತಡವನ್ನು ನಿವಾರಿಸಿ ಅದರಿಂದ ಹೊರ ಬಂದು ಬದುಕುವುದನ್ನು ಕಲಿಯಬೇಕು. ದೈಹಿಕವಾಗಿ ಎಷ್ಟು ಆರೋಗ್ಯವಂತರಾಗಿರುತ್ತೇವೆಯೋ ಮಾನಸಿಕವಾಗಿ ಅಷ್ಟೇ ಆರೋಗ್ಯವಂತರಾಗಿರೋದು ಬಹಳ ಮುಖ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡು ಇದ್ದಾಗ ಮಾತ್ರ ಅದು ಆರೋಗ್ಯಯುತ ಜೀವನವಾಗಲು ಸಾಧ್ಯ ಎಂದರು.

ಸAಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮನೋವೈದ್ಯ ಡಾ. ಡೆವಿನ್ ಮಾತನಾಡಿ, ಮಾನಸಿಕವಾಗಿ ಬಳಲುವವರು ನಮ್ಮ ಸುತ್ತಮುತ್ತ ಇರುತ್ತಾರೆ ಅವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. ಅವರ ವರ್ತನೆ, ಮಾತನಾಡುವ ಶೈಲಿ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ನೋಡಿ ಅವರ ಸಮಸ್ಯೆ ಅರಿಯಬೇಕು. ಮಾನಸಿಕ ಒತ್ತಡಕ್ಕೆ ಒಳಗಾದವರಲ್ಲಿ ದೈಹಿಕವಾಗಿ ತಲೆ, ಹೊಟ್ಟೆ, ಅಂಗಾAಗ ನೋವು, ಭಾವನಾತ್ಮಕವಾಗಿ ಅಳುವುದು, ನಗುವುದು, ಕಿರುಚುವುದು, ಅಳುವುದು ಹಾಗೂ ವರ್ತನೆಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಯುವ ಜನರಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು ವಿವಿಧ ಕಾರಣ, ಸಮಯ, ಸನ್ನಿವೇಶಗಳಿಂದ ಒತ್ತಡಕ್ಕೆ ಒಳಗಾಗಿ ಮುಂದೆ ವ್ಯಸನಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭ ಸೂಕ್ತ ಸಮಾಲೋಚನೆ ಚಿಕಿತ್ಸೆ ದೊರೆಯದೆ ಹೋದರೆ ಮುಂದೆ ಖಿನ್ನತೆಗೆ ಒಳಗಾಗಿ ಅಸಾಯಕತೆ ಮೂಡಿ ನನ್ನ ಜೀವ ನಿಷ್ಪçಯೋಜಕ ಎಂಬ ಭಾವನೆ ಬೆಳೆದು ಆತ್ಮಹತ್ಯೆಗೆ ಯತ್ನಿಸುತ್ತಾರೆ. ಇಂತಹ ಲಕ್ಷಣಗಳು ಇದ್ದಲ್ಲಿ ತಕ್ಷಣ ಅಂತಹವರನ್ನು ಗುರುತಿಸಿ ಹೇಗೆ ದೈಹಿಕ ಕಾಯಿಲೆಗಳಿಗೆ ವೈದ್ಯರ ಮೂಲಕ ಔಷಧಿ ಪಡೆಯುತ್ತೇವೇಯೊ ಹಾಗೆಯೆ ಮಾನಸಿಕ ಸಮಸ್ಯೆಗಳಿಗೆ ಆಪ್ತ ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸೆ ಕೊಡಿಸಿ ಅವರ ಜೀವ, ಜೀವನ ಉಳಿಸುವ ಕೆಲಸ ಮಾಡಬೇಕೆಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ವೀಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ, ವಕೀಲರು ಮತ್ತು ನೋಟರಿ ರಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.