ಪೊನ್ನಂಪೇಟೆ, ಅ. ೧೫: ಪೊನ್ನಂಪೇಟೆ ಸಮೀಪದ ಕುಂದ ಮುಗುಟಗೇರಿ ಗ್ರಾಮದಲ್ಲಿರುವ ಕುಂದಬೆಟ್ಟದಲ್ಲಿ ಕೊಡಗಿನ ಪ್ರಥಮ ಬೋಡ್ ನಮ್ಮೆ ತಾ. ೧೭ ಮತ್ತು ೧೮ ರಂದು ನಡೆಯಲಿದೆ.

ಪ್ರತಿ ವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವ ದಿನದಂದು ರಾತ್ರಿ ಮನೆ ಕಳಿ ಮತ್ತು ಮರುದಿನ ಬೆಟ್ಟದ ಮೇಲೆ ಆಚರಿಸಲ್ಪಡುವ ಈ ಹಬ್ಬವೇ ಜಿಲ್ಲೆಯ ಮೊದಲ ಬೋಡ್ ನಮ್ಮೆಯಾಗಿದೆ. ಬೇರಳಿ ನಾಡಿನ ಪಾರಣ ನಮ್ಮೆ ಜಿಲ್ಲೆಯ ಕೊನೆಯ ಬೋಡ್ ನಮ್ಮೆಯಾಗಿರುತ್ತದೆ. ಇದಕ್ಕೆ ಸಂಬAಧಿಸಿದAತೆ ಬೋಡ್ ನಮ್ಮೆ ಹಾಡಿನಲ್ಲಿಯೇ “ಕುಂದತ್ ಬೊಟ್ಟ್’ಲ್ ನೇಂದ ಕುದ್‌ರೆ, ಪಾರಣ ಮಾನಿಲ್ ಅಳ್‌ಂಜ ಕುದುರೆ” ಎಂಬ ನಾಣ್ಣುಡಿ ಇದೆ.

ಬೆಟ್ಟದ ಮೇಲಿನ ಬೊಟ್ಲಪ್ಪ (ಮಹಾದೇಶ್ವರ) ದೇವಸ್ಥಾನವಿರುವ ಈ ಕುಂದಬೆಟ್ಟ ಹಲವು ವಿಸ್ಮಯಗಳನ್ನು ತನ್ನೊಡಲಲ್ಲಿ ತುಂಬಿಕೊAಡಿದೆ. ಹಿಂದೆ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಇಲ್ಲಿ ತಲೆಮರೆಸಿಕೊಂಡಿದ್ದರು ಎಂಬ ಪ್ರತೀತಿ ಇದೆ.

ಎರಡು ದಿನಗಳ ಕಾಲ ನಡೆಯುವ ಈ ಬೇಡು ಹಬ್ಬಕ್ಕೆ ತಲಕಾವೇರಿಯಿಂದ ತೀರ್ಥ ತಂದು ಪೂಜಿಸುವ ಮೂಲಕ ಎಲ್ಲಾ ಜನಾಂಗದವರು ಸೇರಿ ಆಚರಿಸುತ್ತಾರೆ. ತಾ.೧೮ ರಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ಬೆಟ್ಟದ ತಪ್ಪಲಿನಲ್ಲಿರುವ ನಾಡ್ ದೇವಸ್ಥಾನದ ಬಳಿಯ ಅಂಬಲದಲ್ಲಿ ಬಿದಿರಿನಿಂದ ಕೃತಕವಾಗಿ ತಯಾರಿಸಿದ ಎರಡು ಕುದುರೆಗಳನ್ನು ಹೊತ್ತ ವ್ರತದಾರರು ಸಾಂಪ್ರದಾಯಿಕ ವಾದ್ಯಗೋಷ್ಠಿ ಮತ್ತು ಬೋಡ್ ನಮ್ಮೆಯ ದೋಲ್ ಬಾರಿಸುತ್ತಾ ಬೆಟ್ಟಕ್ಕೆ ಹೆಜ್ಜೆ ಹಾಕುತ್ತಾರೆ. ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಬೆಟ್ಟದಲ್ಲಿನ ವಿಸ್ಮಯಗಳು

ಹಬ್ಬದ ಸಂದರ್ಭ ಭಕ್ತಾದಿಗಳಿಗೆ ಇಲ್ಲಿನ ವಿಸ್ಮಯಗಳು ಕುತೂಹಲ ಮೂಡಿಸುತ್ತವೆ. ಪಾಂಡವರು ಕಲ್ಲಿನಲ್ಲಿ ದೇಗುಲ ನಿರ್ಮಿಸಿ ಈಶ್ವರನನ್ನು ಪೂಜಿಸುತ್ತಿದ್ದರು ಎಂಬ ಪ್ರತೀತಿ ಇದೆ.

ಬೃಹತ್ ಆಕಾರದ ಬಂಡೆ ಬೀಳುವ ಹಂತದಲ್ಲಿದ್ದರೂ ಚಿಕ್ಕದೊಂದು ಚಪ್ಪಟೆ ಕಲ್ಲಿನ ಸಹಾಯದಿಂದ ನಿಂತಿದೆ. ಈ ಕಲ್ಲಿನಲ್ಲಿ ಭೀಮನು ಮಂಡಿಯೂರಿದ ಮತ್ತು ಬೆರಳಿನ ಗುರುತು ಕಾಣಬಹುದು.

ಅರ್ಜುನನ ಕುದುರೆಯ ಗೊರಸಿನ ಗುರುತು, ಬೃಹತ್ ಹುಲಿಗುಹೆ ಇಲ್ಲಿದೆ. ಈ ಹಿಂದೆ ಇಲ್ಲಿ ವಾಸವಿದ್ದ ಹುಲಿಗಳು ಹಬ್ಬಕ್ಕೂ ಮುನ್ನ ಬೇರೆಡೆಗೆ ತೆರಳಿ, ಹಬ್ಬದ ನಂತರ ಗುಹೆಗೆ ಮರಳುತ್ತಿದ್ದವು ಎಂಬುದು ಸ್ಥಳೀಯರ ನಂಬಿಕೆ.

ಇಲ್ಲಿನ ದೇವಸ್ಥಾನಕ್ಕೆ ಮನೆಯಪಂಡ ಕುಟುಂಬ ದೇವತಕ್ಕರಾಗಿದ್ದು, ಸಣ್ಣುವಂಡ ಕುಟುಂಬ ಭಂಡಾರ ತಕ್ಕರಾಗಿರುತ್ತಾರೆ. ವರ್ಷದಲ್ಲಿ ಎರಡು ಬಾರಿ ಮಾತ್ರ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸ ಹೊರತುಪಡಿಸಿದರೆ ಬೇಡು ಹಬ್ಬದ ದಿನ ಪೂಜೆ ನಡೆಯುತ್ತದೆ. ಕಾವೇರಿ ತುಲಾ ಸಂಕ್ರಮಣವು ಈ ಹಬ್ಬವನ್ನು ನಿಶ್ಚಯಿಸುತ್ತದೆ. ಬೆಟ್ಟದ ಮೇಲಿನ ಶ್ರೀ ಈಶ್ವರ ದೇವಾಲಯವು ೧೮೫೦ಕ್ಕಿಂತಲೂ ಹಳೆಯ ಇತಿಹಾಸ ಹೊಂದಿದ್ದು, ೧೮೫೭ರಲ್ಲಿ ನವೀಕರಣಗೊಂಡಿದೆ. ಪಾಂಡವರು ದೇಗುಲ ನಿರ್ಮಿಸುವಾಗ ಬೆಳಕು ಹರಿದ ಕಾರಣ ಬಾಗಿಲು ಅಪೂರ್ಣವಾಗಿತ್ತು, ನಂತರ ಇತ್ತೀಚಿನ ವರ್ಷಗಳಲ್ಲಿ ಗರ್ಭಗುಡಿಗೆ ಬಾಗಿಲು ನಿರ್ಮಿಸಲಾಗಿದೆ.