ಶ್ರೀಮಂಗಲ, ಅ. ೧೫: ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ-ಸಾಂಸ್ಕೃತಿಕ ಸಂಸ್ಥೆ ಹಾಗೂ ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯರಿಂದ ಗುರುವಾರ ಟಿ. ಶೆಟ್ಟಿಗೇರಿ ಪಟ್ಟಣದ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ತಾವಳಗೇರಿಯ ಪೌರಾಣಿಕ ಹಿನ್ನೆಲೆಯುಳ್ಳ ಪ್ರಸಿದ್ಧ “ಪೆರುಮಾಳ್ ಪಟ್ಟಿ”ಯಿಂದ ಟಿ. ಶೆಟ್ಟಿಗೇರಿಯ ಕೊರಕೊಟ್ಟ್ ಅಯ್ಯಪ್ಪ ದೇವಸ್ಥಾನದ ಹೆಬ್ಬಾಗಿಲವರೆಗೆ ಹಾಗೂ ರೂಟ್ಸ್ ವಿದ್ಯಾಸಂಸ್ಥೆಯವರೆಗೆ ಸದಸ್ಯರೆಲ್ಲರೂ ಸ್ವ ಇಚ್ಚೆಯಿಂದ ಪಾಲ್ಗೊಂಡು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

“ಸ್ವಚ್ಛತೆಯೇ ದೈವತ್ವ” ಎಂಬ ಘೋಷವಾಕ್ಯದಡಿಯಲ್ಲಿ ಮುಂಜಾನೆ ೬-೦೦ ಗಂಟೆಯಿAದ ೮-೩೦ ಗಂಟೆಯವರೆಗೆ ನಡೆಸಿದ ಕಾರ್ಯಕ್ರಮದಲ್ಲಿ ಮೂರೂ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದು ಟಿ. ಶೆಟ್ಟಿಗೇರಿ ಪಟ್ಟಣ ಸುತ್ತಮುತ್ತಲಿನ ಸುಮಾರು ನಾಲ್ಕು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿದ್ದ ಕಸತೆಗೆದು ಸ್ವಚ್ಛಗೊಳಿಸಿದರು.

ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ವತಿಯಿಂದ ವಿವಿಧ ಸಂಘ - ಸಂಸ್ಥೆಗಳ ಸಹಕಾರದಲ್ಲಿ ಈ ತಿಂಗಳ ೧೮ ರಿಂದ ೨೭ ರವರೆಗೆ ಹತ್ತನೆ ವರ್ಷದ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮ ನಡೆಸುತ್ತಿದ್ದು, ಇದರ ಅಂಗವಾಗಿ ತಾ. ೧೭ರ ರಾತ್ರಿ ತಲಕಾವೇರಿಯಿಂದ ಕಾವೇರಿ ತೀರ್ಥ ತಂದು, ಕೊಡವ ಸಮಾಜದಲ್ಲಿ ೧೮ ರಂದು ಬೆಳಿಗ್ಗೆ ೧೦ ಗಂಟೆಗೆ ತೀರ್ಥ ಪೂಜೆ ಹಾಗೂ ಕಣಿ ಪೂಜೆ ನೆರವೇರಿಸಿದ ನಂತರ ಭಕ್ತಾದಿಗಳಿಗೆ ಕಾವೇರಿ ತಾಯಿಯ ಪವಿತ್ರ ತೀರ್ಥವನ್ನು ವಿತರಿಸಲಾಗುವುದು.

ತಾಯಿ ಕಾವೇರಿ ಪವಿತ್ರ ತೀರ್ಥ ರೂಪಿಣಿಯಾಗಿ ಅವಿರ್ಭವಿಸುವ ಸಂದರ್ಭ ಹಾಗೂ ಕಾವೇರಿ ತೀರ್ಥವನ್ನು ಟಿ. ಶೆಟ್ಟಿಗೇರಿಗೆ ತರುವ ಮುನ್ನ ಕೊಡವ ಸಮಾಜ ವ್ಯಾಪ್ತಿಯ ಪ್ರದೇಶ ಸ್ವಚ್ಛವಾಗಿರಬೇಕೆಂಬ ಉದ್ದೇಶದಿಂದ ನೆರವೇರಿಸಿದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ, ಸಂಭ್ರಮ ಪೊಮ್ಮಕ್ಕಡ ಕೂಟದ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷ - ಆಡಳಿತ ಮಂಡಳಿ ಹಾಗೂ ಸದಸ್ಯರು ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.