ಮಡಿಕೇರಿ, ಅ. ೧೫: ಕೇಂದ್ರದ ಬಿಜೆಪಿ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಕೇಂದ್ರ ತನಿಖಾ ದಳವನ್ನು (ಸಿಬಿಐ) ರಾಜಕೀಯ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷಿö್ಮÃನಾರಾಯಣ ನಾಗವಾರ ಬಣ) ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿತು.

ಕರ್ನಾಟಕ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಮನವಿ ಸಲ್ಲಿಸಲಾಯಿತು ಎಂದು ಸಮಿತಿಯ ಪ್ರಮುಖರು ತಿಳಿಸಿದರು.

ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ರಕ್ಷಿಸಬೇಕು ಹಾಗೂ ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಚುನಾವಣಾ ಆಯೋಗ, ಇಡಿ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಸಂಸ್ಥೆಗಳಾಗಿವೆ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಮತ್ತು ಹಿತಾಸಕ್ತಿಗಳಿಗಾಗಿ ಈ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದು ಜನವಿರೋಧಿ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕರಾದ ಜೆ.ಎಲ್. ಜನಾರ್ಧನ್, ಎಂ.ಎಸ್. ವೀರೇಂದ್ರ, ಸಂಘಟನಾ ಸಂಚಾಲಕ ಡಿ.ಎಸ್. ಕಾಂತರಾಜ್, ಮಹಿಳಾ ಒಕ್ಕೂಟದ ಸಂಚಾಲಕಿ ಪ್ರಮೀಳಾ, ಮಡಿಕೇರಿ ತಾಲೂಕು ಸಂಚಾಲಕ ಹರೀಶ್, ಸೋಮವಾರಪೇಟೆ ತಾಲೂಕು ಸಂಚಾಲಕ ಯತೀಶ್ ಬಿದರೂರು, ಮಂಜುನಾಥ್ ಮಾದ್ರೆ ಸೇರಿದಂತೆ ಹಲವರು ಹಾಜರಿದ್ದರು.