ಗೋಣಿಕೊಪ್ಪಲು, ಅ. ೧೫: ಕಲೆ, ಸಂಸ್ಕೃತಿ ಹಾಗೂ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ ಮೂಲಕವೂ ಜನಮೆಚ್ಚುಗೆ ಗಳಿಸುತ್ತಿರುವ ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದಾನದ ಸಂದೇಶ ಸಾರಿತು.
೪೮ನೇ ವರ್ಷದ ಶ್ರೀ ಕಾವೇರಿ ದಸರಾ ಜನೋತ್ಸವದ ಅಂಗವಾಗಿ ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ನಗರದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಸಮಾಜದಲ್ಲಿ ರಕ್ತದ ಕೊರತೆ ನೀಗಿಸುವುದು ಹಾಗೂ ಯುವಜನರಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿತ್ತು. ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಸ್ಥ ಡಾ. ಕರುಂಬಯ್ಯ ಅವರ ನೇತೃತ್ವದ ವೈದ್ಯಕೀಯ ತಂಡ ರಕ್ತ ಸಂಗ್ರಹಿಸುವ ಕಾರ್ಯ ನಿರ್ವಹಿಸಿತು.
ಕಾರ್ಯಕ್ರಮವನ್ನು ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ ಉದ್ಘಾಟಿಸಿ ಮಾತನಾಡಿ, ಕಾವೇರಿ ದಸರಾ ಕೇವಲ ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗದೆ, ರಕ್ತದಾನದಂತಹ ಜೀವ ಉಳಿಸುವ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಎನ್. ಪ್ರಕಾಶ್ ಮಾತನಾಡಿ, ರಕ್ತದಾನವು ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ವದ ಕಾರ್ಯವಾಗಿದೆ. ಆರೋಗ್ಯವಂತ ವ್ಯಕ್ತಿಗಳು ವೈದ್ಯಕೀಯ ಮಾರ್ಗದರ್ಶನದಂತೆ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ನೆರವಾಗಬಹುದು ಎಂದು ತಿಳಿಸಿದರು.
ರೆಡ್ಕ್ರಾಸ್ ಸಂಸ್ಥೆಯ ಉಪಸಭಾಪತಿ ದಿಲನ್ ಚಂಗಪ್ಪ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜೋಡುಬೀಟಿ ಜಗದೀಶ್ ಅವರು ರಕ್ತದಾನದ ಮಹತ್ವ ಮತ್ತು ಆರೋಗ್ಯದ ಕಾಳಜಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಎಂ.ಪಿ. ಚಂದನ್ ಕಾಮತ್, ಪಿ.ಜಿ. ರಾಜಶೇಖರ್, ಗಣೇಶ್ ರೈ, ಅಂತೋಣಿ, ಶಾಂತೆಯAಡ ಮಧು ಮಾಚಯ್ಯ, ಕಾವೇರಿ ದಸರಾ ಸಮಿತಿಯ ಉಪಾಧ್ಯಕ್ಷ ನಾಯಂದಿರ ಶಿವಾಜಿ, ಕಾರ್ಯದರ್ಶಿ ವರಲಕ್ಷಿö್ಮ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.