ಸೋಮವಾರಪೇಟೆ, ಅ. ೧೪: ಹಿರಿಯ ಹಾಕಿ ಆಟಗಾರ್ತಿ ಹಾಗೂ ತರಬೇತುದಾರರಾದ ದೇವರಾಜಮ್ಮ ಅವರು ನಾಡೋಜ ಕಮಲ ಹಂಪನಾ ರಾಜ್ಯಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯ ಜನಪದ ಪರಿಷತ್ ಮಹಿಳಾ ಸಮ್ಮೇಳನದಲ್ಲಿ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಹಾಗೂ ಚಲನಚಿತ್ರ ನಟಿ ಉಮಾಶ್ರೀ ಅವರು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ದೇವರಾಜಮ್ಮ ಅವರಿಗೆ ನಾಡೋಜ ಕಮಲ ಹಂಪನಾ ರಾಜ್ಯಪ್ರಶಸ್ತಿ ಪ್ರದಾನ ಮಾಡಿದರು.

ದೇವರಾಜಮ್ಮ ಅವರು ಮೂಲತಃ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ಮೆಣಸ ಗ್ರಾಮದವರಾಗಿದ್ದು, ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ರಾಜ್ಯ ಯುವಜನ ಸೇವಾ ಇಲಾಖೆಯಲ್ಲಿ ಮಹಿಳಾ ಹಾಕಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.