ಐಗೂರು, ಅ.೧೪: ಜಾತಿ, ಧರ್ಮ, ಭಾಷೆಯ ಭೇದವಿಲ್ಲದೆ ನಾವು ದಾನ ಮಾಡುವ ರಕ್ತದ ಕೆಲವು ಹನಿಗಳು ಮತ್ತೊಬ್ಬರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಬಲ್ಲವು ಎಂದು ಕೊಡಗು ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಹಾಗೂ ಮುಖ್ಯಸ್ಥ ಡಾ. ಕರುಂಬಯ್ಯ ಅಭಿಪ್ರಾಯಪಟ್ಟರು.
ಹೊಸತೋಟದ ಸಮುದಾಯ ಭವನದಲ್ಲಿ ಎಡಿಕೇರಿ ಪ್ರಸನ್ನ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಡಿಕೇರಿ ಪ್ರಸನ್ನ ಮಾತನಾಡಿ, ಗ್ರಾಮೀಣ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ಜನಪರ ಕಾರ್ಯಗಳಿಗೆ ತಮ್ಮ ಬೆಂಬಲ ಸದಾ ಇರಲಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಎಡಿಕೇರಿ ಪ್ರಸನ್ನ ಸೇರಿದಂತೆ ಅಭಿಮಾನಿ ಬಳಗದ ಹಲವು ಯುವಕರು ಆರೋಗ್ಯ ತಪಾಸಣೆಗೊಳಗಾಗಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.
ಕಾರ್ಯಕ್ರಮದಲ್ಲಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ಎಡಿಕೇರಿ ಪ್ರಸನ್ನ ಅಭಿಮಾನಿ ಬಳಗದ ಸದಸ್ಯರು ಮತ್ತು ರಕ್ತದಾನಿಗಳು ಪಾಲ್ಗೊಂಡಿದ್ದರು.