ಸಿದ್ದಾಪುರ, ಅ. ೧೪: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪೋಷಕರಿಗೆ ಕುಡಿಯಲು ನೀರು ತೆಗೆದುಕೊಂಡು ಹೋಗುತ್ತಿದ್ದ ೧೬ ವರ್ಷದ ಬಾಲಕನ ಮೇಲೆ ಕಾಡುಕೋಣ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಗ್ರಾಮದಲ್ಲಿ ನಡೆದಿದೆ.
ಚೆನ್ನಂಗಿ ಗ್ರಾಮದ ನಿವಾಸಿ ಅಜ್ಜಿನಿಕಂಡ ಕಾರ್ಯಪ್ಪ ಅವರ ತೋಟದಲ್ಲಿ ಅಸ್ಸಾಂ ಮೂಲದ ಹನೀಫ್ ಆಲಿ ಹಾಗೂ ಅವರ ಪತ್ನಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಅವರ ಮಗ ಹಬೀಬ್ ಆಲಿ (೧೬) ಪೋಷಕರಿಗೆ ಕುಡಿಯಲು ನೀರು ತೆಗೆದುಕೊಂಡು ಹೋಗುತ್ತಿದ್ದಾಗ ಕಾಫಿ ತೋಟದೊಳಗಿದ್ದ ಕಾಡುಕೋಣ ಹಠಾತ್ತನೆ ದಾಳಿ ನಡೆಸಿದೆ. ಕೊಂಬಿನಿAದ ಚುಚ್ಚಿದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಾಲಕನ ಕಿರುಚಾಟ ಕೇಳಿ ತೋಟದಲ್ಲಿದ್ದ ಪೋಷಕರು ಧಾವಿಸಿದ್ದಾರೆ. ಕಾಡುಕೋಣದ ದಾಳಿಯಿಂದ ಹಬೀಬ್ ಆಲಿಯ ಕೈ, ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಆತನನ್ನು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದರು.
ಮೈಸೂರಿನ ಆಸ್ಪತ್ರೆಗೆ ಆನೆಚೌಕೂರು ವನ್ಯಜೀವಿ ವಲಯದ ಅರಣ್ಯಾಧಿಕಾರಿ ಗಂಗಾಧರ್ ಹಾಗೂ ತಿತಿಮತಿ ವಲಯದ ಉಪವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಭೇಟಿ ನೀಡಿ ಬಾಲಕನ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.
ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ವಾಸು