ಸೋಮವಾರಪೇಟೆ, ಅ. ೧೪: ತಾಲೂಕಿನ ಶನಿವಾರಸಂತೆ ಸಮೀಪದ ಹಾರೆಹೊಸೂರು ಗ್ರಾಮದ ಅಂಗಡಿಯಲ್ಲಿ ಅಕ್ರಮವಾಗಿ ಅಡುಗೆ ಸಿಲಿಂಡರ್ ದಾಸ್ತಾನು ಮಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿ ೩೯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ.

ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಆಹಾರ ನಿರೀಕ್ಷಕಿ ಸ್ವಾತಿ, ಶನಿವಾರಸಂತೆ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಒಟ್ಟು ೩೯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲು ಮಾಡಿದ್ದಾರೆ.

ಹಾರೆಹೊಸೂರು ಗ್ರಾಮದ ವಿಜಯ ಎಂಬವರ ದಿನಸಿ ಅಂಗಡಿ ಪಕ್ಕದ ಗೋಡೌನ್‌ನಲ್ಲಿ ಅನಧಿಕೃತವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿರುವುದಲ್ಲದೆ, ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾರೆಂದು ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ದಿಢೀರ್ ದಾಳಿ ನಡೆಸಲಾಯಿತು. ಸ್ಥಳದಲ್ಲಿ ಹೆಚ್.ಪಿ. ಕಂಪೆನಿಯ ಗ್ಯಾಸ್ ತುಂಬಿದ್ದ ೧೩ ಸಿಲಿಂಡರ್ ಸೇರಿದಂತೆ ವಿವಿಧ ಕಂಪೆನಿಗಳ ಖಾಲಿ ಸಿಲಿಂಡರ್ ಸೇರಿದಂತೆ ಒಟ್ಟು ೩೯ ಸಿಲಿಂಡರ್ ಸಿಕ್ಕಿದ್ದು, ಅಧಿಕಾರಿಗಳು ಸ್ಥಳೀಯರ ಸಾಕ್ಷö್ಯದೊಂದಿಗೆ ಮಹಜರು ನಡೆಸಿ ಸಿಲಿಂಡರ್ ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಪ್ರಬಾರ ಆಹಾರ ನಿರೀಕ್ಷಕಿ ಸ್ವಾತಿ ನೀಡಿದ ದೂರಿನ ಹಿನ್ನಲೆಯಲ್ಲಿ ಶನಿವಾರಸಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.