ಮಡಿಕೇರಿ, ಅ. ೧೩: ಸದೃಢ ಮನಸ್ಥಿತಿ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದ್ದು, ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಕರೆ ನೀಡಿದರು.
ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದ ರಾಜ್ದರ್ಶನ್ ಸಭಾಂಗಣದಲ್ಲಿ ನಡೆದ ಚೆಸ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕುಟುಂಬಸ್ಥರ ಕಾರ್ಯ ಶ್ಲಾಘನೀಯ. ಇತರರಲ್ಲಿರುವ ಪ್ರತಿಭೆಯನ್ನು ಗುರುತಿಸುವುದೂ ಒಂದು ಪ್ರತಿಭೆಯೇ ಆಗಿದೆ. ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಚೆಸ್ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಕ್ಕಳಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೊರತರುವುದರ ಜೊತೆಗೆ ಏಕಾಗ್ರತೆಯನ್ನು ವೃದ್ಧಿಸಲು ಚದುರಂಗ ಸಹಕಾರಿಯಾಗಿದೆ ಎಂದರು.
ಚೆಸ್ ಆಟದಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆ ಹಾಗೂ ಸ್ಥಿತಪ್ರಜ್ಞತೆಯನ್ನು ಬೆಳೆಸಿಕೊಳ್ಳಬಹುದು. ಈ ಗುಣಗಳು ಶಿಕ್ಷಣದಲ್ಲಿಯೂ ಯಶಸ್ಸು ಸಾಧಿಸಲು ನೆರವಾಗುತ್ತವೆ. ಶಿಕ್ಷಣದ ಮೂಲಕ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಇವೆಲ್ಲದರ ಪರಿಣಾಮವಾಗಿ ಸದೃಢ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪಂದ್ಯಾವಳಿಯಲ್ಲಿ ೧೫೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಹಾಗೂ ಸದಸ್ಯರು ನಿರಂತರವಾಗಿ ಶ್ರಮಿಸುತ್ತಿರುವುದು ಪ್ರಶಂಸನೀಯ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಸರಾ ಉತ್ಸವಕ್ಕೆ ಹೊಸ ಆಯಾಮ ನೀಡುತ್ತಿದ್ದು, ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡಾ ಸಮಿತಿಗೆ ಸರ್ಕಾರದಿಂದ ಕೇವಲ ೨ ರಿಂದ ೩ ಲಕ್ಷ ರೂ. ಅನುದಾನ ದೊರೆಯುತ್ತಿದ್ದರೂ, ಸಮಿತಿಯು ೧೨ ರಿಂದ ೧೩ ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕ್ರೀಡಾ ಸಮಿತಿಗೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.
ಮಡಿಕೇರಿ ಟೌನ್ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಸರಾ ಕ್ರೀಡಾ ಸಮಿತಿಯು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಸರಾ ಉತ್ಸವಕ್ಕೆ ಹೊಸ ಕಳೆ ತಂದಿದೆ. ಈ ಕಾರ್ಯಕ್ರಮಗಳ ಹಿಂದೆ ಸಮಿತಿಯ ಸದಸ್ಯರು ತೆರೆಮರೆಯಲ್ಲಿ ಅಪಾರ ಶ್ರಮ ವಹಿಸುತ್ತಿದ್ದಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಗೇಶ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ೯, ೧೧, ೧೪ ಮತ್ತು ೧೬ ವರ್ಷ ವಯೋಮಾನದೊಳಗಿನ ವಿಭಾಗಗಳೊಂದಿಗೆ ಮುಕ್ತ ವಿಭಾಗದಲ್ಲಿಯೂ ೧೫೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.