ಮಡಿಕೇರಿ, ಅ. ೧೩: ಮಡಿಕೇರಿ ದಸರಾ ಜನೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರ ಅಸಮರ್ಪಕವಾಗಿದೆ ಎಂದು ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ದಸರಾ ಪ್ರಯುಕ್ತ ಪ್ರತಿವರ್ಷ ಹನ್ನೊಂದು ದಿನಗಳ ಕಾಲ ಮಡಿಕೇರಿ ನಗರ ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತದೆ. ಪ್ರತಿ ಬಾರಿಯೂ ಟ್ಯೂಬ್ ಲೈಟ್‌ಗಳ ಮೂಲಕ ನಗರದಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈ ಬಾರಿ ಟ್ಯೂಬ್ ಲೈಟ್‌ಗಳಿಗೆ ಬದಲಾಗಿ ಬಲ್ಬ್ಗಳ ಮಾಲೆಯನ್ನು ಅಳವಡಿಸಲಾಗಿದೆ. ಟ್ಯೂಬ್ ಲೈಟ್‌ಗಳನ್ನು ರಸ್ತೆಗಳ ಬದಿಯಲ್ಲಿ ಸುರಕ್ಷಿತ ರೀತಿಯಲ್ಲಿ ಅಳವಡಿಸಲಾಗುತ್ತಿತ್ತು. ಆದರೆ ಬಲ್ಬ್ ಗಳನ್ನು ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದು, ಇದು ವಿಜಯ ದಶಮಿ ದಿನ ದಶಮಂಟಪಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡಲಿದೆ ಎಂದು ಸಮಿತಿ ಪದಾಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ ಮಂಟಪಗಳು ಸಾಗುವಾಗ ಅನಿವಾರ್ಯವಾಗಿ ಈ ಬಲ್ಬ್ಗಳನ್ನು ತೆರವುಗೊಳಿಸಬೇಕಾಗುತ್ತದೆ. ಇದರಿಂದ ನಗರದಲ್ಲಿ ಕತ್ತಲೆಯ ವಾತಾವರಣ ಮೂಡಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಸಮಿತಿ ಗಮನ ಸೆಳೆದಿದೆ.

ತಕ್ಷಣ ಅಲಂಕಾರ ಸಮಿತಿ ಹಾಗೂ ಸಂಬAಧಿಸಿದ ಅಧಿಕಾರಿಗಳು ಇದನ್ನು ಗಮನಿಸಿ ಟ್ಯೂಬ್ ಲೈಟ್‌ಗಳ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಕೆಲವು ವಿದ್ಯುತ್ ಅಲಂಕೃತ ದೇವರ ಫಲಕಗಳು ಭಾರೀ ಗಾಳಿಗೆ ಬೀಳುವ ಹಂತದಲ್ಲಿದ್ದು, ಇವುಗಳನ್ನು ಸರಿಪಡಿಸುವ ಮೂಲಕ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದೆ.