ಮಡಿಕೇರಿ, ಅ. ೧೩: ರೈತರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಕೃಷಿ ಮತ್ತು ಕೃಷಿ ಸಂಬAಧಿತ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ ಮುಂತಾದ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
ರೈತರಿಗೆ ವಿವಿಧ ಇಲಾಖೆಗಳ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ರೈತರ ದತ್ತಾಂಶವನ್ನು ಸಂಗ್ರಹಿಸಿ, ಪ್ರತಿಯೊಬ್ಬ ರೈತರಿಗೆ ಪ್ರತ್ಯೇಕ ಗುರುತಿನ ಸಂಖ್ಯೆ (ಫಾರ್ಮರ್ ಐಡಿ/ಎಫ್ಐಡಿ) ನೀಡಲಾಗುತ್ತಿದೆ.
ಎಫ್ಐಡಿ ಎನ್ನುವುದು ರೈತರಿಗೆ ನೀಡಲಾಗುವ ಒಂದು ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆಯಾಗಿದ್ದು, ರೈತರ ಆಧಾರ್ ಕಾರ್ಡ್, ಭೂ ದಾಖಲೆ, ಬ್ಯಾಂಕ್ ಖಾತೆ ಮತ್ತು ಇತರ ಸಾಮಾಜಿಕ ದಾಖಲಾತಿಗಳನ್ನು ಒಂದೇ ಡಿಜಿಟಲ್ ವ್ಯವಸ್ಥೆಗೆ ಜೋಡಿಸಲಾಗುತ್ತಿದೆ. ಇದು ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು ಅತ್ಯಂತ ಮುಖ್ಯವಾಗಿದೆ.
ಪಿ.ಎಂ-ಕಿಸಾನ್ ಯೋಜನೆ ಸೇರಿದಂತೆ ಇತರ ಆರ್ಥಿಕ ನೆರವುಗಳನ್ನು ನೇರವಾಗಿ ರೈತರ ಬ್ಯಾಂಕುಗಳಿಗೆ ವರ್ಗಾವಣೆ ಮಾಡಲು ಎಫ್ಐಡಿ ಕಡ್ಡಾಯವಾಗಿದೆ. ಕೃಷಿ ಸಾಲ ಸೌಲಭ್ಯ ಪಡೆಯಲು ಮತ್ತು ಬೆಳೆ ವಿಮೆ ಮಾಡಿಸುವಾಗ ರೈತರ ಅರ್ಹತೆಯನ್ನು ಸುಲಭವಾಗಿ ಪರಿಶೀಲಿಸಲು ಎಫ್ಐಡಿ ಅವಶ್ಯವಾಗಿದೆ. ಯೂರಿಯಾ ರಸಗೊಬ್ಬರವನ್ನು ರಿಯಾಯಿತಿಯಲ್ಲಿ ಪಡೆಯಲು ಎಫ್ಐಡಿ ಕಡ್ಡಾಯವಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಇತರೆ ಯೋಜನೆಗಳ ಸೌಲಭ್ಯ ಪಡೆಯಲು ಎಫ್ಐಡಿ ಅವಶ್ಯ. ಬರ/ನೆರೆ ಸಂದರ್ಭಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನೀಡುವ ಬೆಳೆ ನಷ್ಟ ಪರಿಹಾರ ಧನ ಪಡೆಯಲು ಎಫ್ಐಡಿ ಕಡ್ಡಾಯ. ಬೆಂಬಲ ಬೆಲೆ ಯೋಜನೆಯಡಿ ಪ್ರಯೋಜನ ಪಡೆಯಲು ಎಫ್ಐಡಿ ಅವಶ್ಯವಿದೆ.
ರೈತ ಬಾಂಧವರು ಅಗತ್ಯ ದಾಖಲಾತಿ ಗಳಾದ ಆಧಾರ್ ಕಾರ್ಡ್, ಜಮೀನಿನ ವಿವರಗಳುಳ್ಳ ಪಹಣಿ ಪತ್ರಗಳು (ಆರ್ಟಿಸಿ), ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ) ಹಾಗೂ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಯೊಂದಿಗೆ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರೈತರ ಗುರುತಿನ ಸಂಖ್ಯೆಯನ್ನು ಪಡೆಯುವಂತೆ ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.