ಮಡಿಕೇರಿ, ಅ. ೧೩: ಅರಣ್ಯ ಇಲಾಖೆ ಕಲ್ಲಹಳ್ಳ ವಲಯದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ನಿಟ್ಟೂರು - ಕಾರ್ಮಾಡು ಚೆಕ್ಪೋಸ್ಟ್ನಿಂದ ಕೊಳಂಗೆರೆ ವೃತ್ತದವರೆಗಿನ ರಸ್ತೆಯ ಎರಡು ಬದಿಯಲ್ಲಿ ಎಸೆಯಲ್ಪಟ್ಟಿರುವ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ನಾಗರಹೊಳೆ ಕಲ್ಲಳ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಚಾಲನೆ ನೀಡಿದರು. ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಅರಣ್ಯ ಇಲಾಖೆಯೊಂದಿಗೆ ಸರ್ವರೂ ಕೈಜೋಡಿಸಿ ಪರಿಸರವನ್ನು ಸಂರಕ್ಷಿಸಲು ಸಹಕರಿಸಬೇಕೆಂದು ಕರೆ ನೀಡಿದರು
ಗ್ರಾಮಸ್ಥರ ಪರವಾಗಿ ಪಡಿಞರಂಡ ಪ್ರಭು ಕುಮಾರ್ ಮಾತನಾಡಿ, ನಾಗರಹೊಳೆ ರಾಷ್ಟಿçÃಯ ಅಭಯಾರಣ್ಯದ ಪರಿಸರ ಸಂಪತ್ತನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನರು ಬರುತ್ತಿದ್ದು, ಈ ರಕ್ಷಿತಾರಣ್ಯದ ಅರಣ್ಯದಂಚಿನಲ್ಲಿ ಕಾರ್ಮಾಡು ಗ್ರಾಮವಿದ್ದು ಪ್ರಕೃತಿಯೊಂದಿಗೆ ನಿತ್ಯದ ಬದುಕನ್ನು ಕಟ್ಟಿಕೊಂಡು ಶುದ್ಧ ಗಾಳಿ ಹಾಗೂ ನೀರನ್ನು ಸೇವಿಸುವ ಅವಕಾಶ ಸಿಕ್ಕಿದ್ದು ಜಾಗತಿಕ ತಾಪಮಾನದ ಏರಿಕೆಯಿಂದ ಭೂಮಂಡಲವು ಆಪಾಯದ ಅಂಚಿನಲ್ಲಿದ್ದು ಈ ನಿಟ್ಟಿನಲ್ಲಿ ಪರಿಸರದ ರಕ್ಷಣೆಯ ಜವಾಬ್ದಾರಿ ಎಲ್ಲರ ಹೆಗಲ ಮೇಲಿದ್ದು ಪರಿಸರವನ್ನು ಉಳಿಸುವದರೊಂದಿಗೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸುವ ಕಾರ್ಯಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಲ್ಲಹಳ್ಳ ವನ್ಯಜೀವಿ ವಲಯ ಅರಣ್ಯಾಧಿಕಾರಿ ಗಳಾದ ಸುಬ್ರಮಣ್ಯರವರು ಸ್ವಾಗತಿಸಿದರು. ಕಲ್ಲಹಳ್ಳ ವನ್ಯಜೀವಿ ಉಪ ವಲಯದ ಅರಣ್ಯಾಧಿಕಾರಿ ರಂಜಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಮಾಡು ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಯ ನಿರ್ದೇಶಕರಾದ ಕೊಟ್ಟಂಗಡ ಮಧು ಮಂಜುನಾಥ್, ಗಾಣಂಗಡ ಸುದೀಪ್, ಮೋಹನ್ ಬೆಂಡೆಕುತ್ತಿ, ಗ್ರಾಮಸ್ಥರಾದ ಸೂರೇಶ್, ಕಾವೇರಿ, ಉದಿತ್, ಉದಯ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.