ಶ್ರೀಮಂಗಲ, ಅ. ೧೩: ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಬೊಮ್ಮಾಡು ಹಾಡಿ ಸಮೀಪ ರೂ. ೧೦ ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರುವ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಉದ್ಘಾಟಿಸಿ ದರು.

ಬಳಿಕ ಸ್ಥಳೀಯರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಅಂಗನವಾಡಿ ಕೇಂದ್ರವು ಪ್ರತಿ ಮಗುವಿನ ಭವಿಷ್ಯ ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಮಗು ಜನನವಾದ ಬಳಿಕ ತನ್ನ ಮನೆಯಿಂದ ಮೊದಲ ಬಾರಿಗೆ ವಿದ್ಯಾಭ್ಯಾಸಕ್ಕೆ ತೆರಳುವುದು ಅಂಗನವಾಡಿ ಕೇಂದ್ರಕ್ಕೆ. ಅಂಗನವಾಡಿ ಕೇಂದ್ರಗಳಲ್ಲಿ ಮಗುವಿನ ವಿದ್ಯಾಭ್ಯಾಸದ ಪ್ರಥಮ ಪ್ರಮುಖ ಘಟ್ಟ ಆರಂಭವಾಗುತ್ತದೆ. ಇದೇ ಜಾಗದಲ್ಲಿ ಒಂದು ಪುಟಾಣಿ ಕಂದ ತನ್ನ ಸುತ್ತಮುತ್ತಲಿನ ಮಕ್ಕಳೊಂದಿಗೆ ಬೆರೆಯುವುದನ್ನು ಕಲಿಯಲು ಆರಂಭಿಸುತ್ತದೆ. ಆದ್ದರಿಂದ ಪ್ರತಿ ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು ಪ್ರತಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಅಧ್ಯಕ್ಷರು ತೀತಿರ ಕಟ್ಟಿ ಕಾರ್ಯಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕೆ ಬಾಡಗ ವಲಯ ಅಧ್ಯಕ್ಷರಾದ ರವಿ, ಪಂಚಾಯತಿ ಮಾಜಿ ಅಧ್ಯಕ್ಷ ಸೋಮಯ್ಯ, ಪಕ್ಷದ ಮುಖಂಡರು ಕೇಚಮಾಡ ಸಿದ್ದು ನಾಚಪ್ಪ, ಮಚ್ಚಮಾಡ ಮನು, ನಿಕಿಲ್, ಅಂಗನವಾಡಿ ಶಿಕ್ಷಕರು, ಸಿಬ್ಬಂದಿಗಳು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.