ಚೆಟ್ಟಳ್ಳಿ, ಅ. ೧೩: ಕೊಡವ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಕೊಡವ ಜನಾಂಗದ ಒಗ್ಗಟ್ಟನ್ನು ಬಲಪಡಿಸುವ ಉದ್ದೇಶದಿಂದ ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಸಮಾಜದ ಮಹಾಸಭೆ ಹಾಗೂ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟವನ್ನು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಆಚರಿಸಲಾಯಿತು.

ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಪಳಂಗAಡ ಗೀತ ಸುಬ್ಬಯ್ಯ ಪ್ರಾರ್ಥಿಸಿದರು. ಮುಳ್ಳಂಡ ಮಾಯಮ್ಮ ತಮ್ಮಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಕೆಚ್ಚೆಟ್ಟಿರ ರತಿ ಕಾರ್ಯಪ್ಪ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ನೂತನ ಸದಸ್ಯರನ್ನು ಸ್ವಾಗತಿಸಲಾಯಿತು.

ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ಕೊಡವ ಸಂಸ್ಕೃತಿ ಹಾಗೂ ಜನಾಂಗದ ಅಸ್ಮಿತೆಯ ಉಳಿವಿಗಾಗಿ ಚೆಟ್ಟಳ್ಳಿ ಕೊಡವ ಸಮಾಜವನ್ನು ಸ್ಥಾಪಿಸಿ ಆರು ವರ್ಷಗಳು ಪೂರ್ಣಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಪುತ್ತರಿ ಹಾಗೂ ಕೈಲ್‌ಪೊಳ್ದ್ ಹಬ್ಬಗಳ ಆಚರಣೆಗೆ ಕೃಷಿಯೇ ಮೂಲಾಧಾರವಾಗಿದೆ. ಆದರೆ, ಇಂದು ನಾವೆಲ್ಲ ಕೃಷಿ ಬದುಕಿನಿಂದ ದೂರವಾಗುತ್ತಿರುವುದು ಬೇಸರದ ಸಂಗತಿ. ಮುಂದಿನ ಪೀಳಿಗೆಯ ಮಕ್ಕಳಿಗೆ ಕೊಡವ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳ ಮಹತ್ವವನ್ನು ತಿಳಿಸಿ, ಅವರನ್ನು ನಮ್ಮ ನೆಲದ ಸಂಸ್ಕೃತಿಯೊAದಿಗೆ ಬೆಸೆಯುವ ಕೆಲಸವಾಗಬೇಕು ಎಂದು ಕರೆ ನೀಡಿದರು. ಕೊಡವ ಜನಾಂಗಕ್ಕೆ ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನಡೆಸುತ್ತಿರುವ ಹೋರಾಟಕ್ಕೆ ಚೆಟ್ಟಳ್ಳಿ ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದರು. ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ ವಂದಿಸಿದರು.

ಸAಪ್ರದಾಯಬದ್ಧ ಪೂಜೆ, ಕ್ರೀಡಾಕೂಟದ ಸಂಭ್ರಮ

ಮಹಾಸಭೆಯ ಬಳಿಕ ನಡೆದ ಕೈಲ್‌ಪೊಳ್ದ್ ಒತ್ತೋರ್ಮೆ ಸಂತೋಷಕೂಟದಲ್ಲಿ ಕೊಡವರ ವೀರಪರಂಪರೆ ಹಾಗೂ ಸಂಪ್ರದಾಯಕ್ಕೆ ಸಾಕ್ಷಿಯಾದ ವಿವಿಧ ಆಚರಣೆಗಳು ಗಮನ ಸೆಳೆದವು. ಸಮಾಜದ ಉಪಾಧ್ಯಕ್ಷ ಬಿದ್ದಂಡ ಮಾದಯ್ಯ ಅವರು ಸಂಪ್ರದಾಯದAತೆ ಕೋವಿಗೆ ಪೂಜೆ ಸಲ್ಲಿಸಿದರು. ಹಿರಿಯ ಮಹಿಳೆಯರು ಗುರುಕಾರೋಣರಿಗೆ ಮೀದಿ ನೀರಿಟ್ಟು ಪ್ರಾರ್ಥನೆ ಸಲ್ಲಿಸಿದರು. ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯ ಅವರು ಸಮಾಜದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಪ್ರಾರ್ಥಿಸಿದರು.

ಬಳಿಕ ಪುರುಷರು ಮತ್ತು ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ತೆಂಗಿನಕಾಯಿಗೆ ಕಲ್ಲು ಎಸೆಯುವ ಸ್ಪರ್ಧೆ, ಮಹಿಳೆಯರ ವಾಲಗ ನೃತ್ಯ ಸೇರಿದಂತೆ ಹಲವು ಮನರಂಜನಾ ಸ್ಪರ್ಧೆಗಳು ಉತ್ಸಾಹದಿಂದ ನಡೆದವು.

ಸ್ಪರ್ಧಾ ವಿಜೇತರು

ತೆಂಗಿನಕಾಯಿಗೆ ಗುಂಡು ಹೊಡೆಯುವ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪುತ್ತರಿರ ಗಣೇಶ್ ಭೀಮಯ್ಯ ಪ್ರಥಮ, ಮುಳ್ಳಂಡ ರತ್ತು ಚಂಗಪ್ಪ ದ್ವಿತೀಯ ಸ್ಥಾನ ಪಡೆದರು. ತೆಂಗಿನಕಾಯಿಗೆ ಕಲ್ಲು ಎಸೆಯುವ ಸ್ಪರ್ಧೆಯಲ್ಲಿ ಅಡಿಕೆರ ಜಯ ಮುತ್ತಪ್ಪ ಪ್ರಥಮ, ಪುತ್ತರಿರ ಕರುಣ್ ಕಾಳಯ್ಯ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರ ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ಅಡಿಕೆರ ಶಾಂತಿ ಮುತ್ತಪ್ಪ ಪ್ರಥಮ, ಮತ್ರಂಡ ಬೋಪಣ್ಣ ಬಿದ್ದಪ್ಪ ದ್ವಿತೀಯ ಸ್ಥಾನ ಪಡೆದರು. ವಾಲಗ ನೃತ್ಯ ಸ್ಪರ್ಧೆಯಲ್ಲಿ ಕೆಚ್ಚೆಟ್ಟಿರ ಮೈನಾ ಪ್ರಥಮ, ಕೆಚ್ಚೆಟ್ಟಿರ ರತಿ ಕಾರ್ಯಪ್ಪ ದ್ವಿತೀಯ ಸ್ಥಾನ ಗಳಿಸಿದರು.

ಪಾಸಿಂಗ್‌ದ ಬಾಲ್ ಸ್ಪರ್ಧೆಯಲ್ಲಿ ಪುತ್ತರಿರ ಸೀತಮ್ಮ ಮೊಣ್ಣಪ್ಪ ಪ್ರಥಮ, ಮುಳ್ಳಂಡ ಪಟ್ಟು ಮಾದಪ್ಪ ದ್ವಿತೀಯ ಸ್ಥಾನ ಪಡೆದರು. ಬಾಲ್ ಇನ್ ದ ಬಕೆಟ್ ಸ್ಪರ್ಧೆಯಲ್ಲಿ ಪುತ್ತರಿರ ಗಂಗು ಸುರೇಶ್ ಪ್ರಥಮ, ಮುಳ್ಳಂಡ ವಿಂದ್ಯಾ ರಂಜನ್ ದ್ವಿತೀಯ ಸ್ಥಾನ ಗಳಿಸಿದರು.

ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಹಾಗೂ ಹಿರಿಯ ಸದಸ್ಯರಾದ ಪುತ್ತರಿರ ಯಶೋಧ ಕರುಂಬಯ್ಯ, ಕೊಂಗೇಟಿರ ದೇಚು ಮುದ್ದಯ್ಯ ಮತ್ತು ಚೋಳಪಂಡ ನಾಣಯ್ಯ ಅವರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.