ಕಣಿವೆ, ಅ. ೧೩: ಇದೇ ಮೊದಲ ಬಾರಿಗೆ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಮೈಸೂರು ದಸರಾದ ಅಂಬಾರಿ ಹೊರಲು ದುಬಾರೆ ಸಾಕಾನೆ ಶಿಬಿರದ ಪ್ರಶಾಂತ್ ಸಾಕಾನೆಯನ್ನು ನೇಮಕ ಮಾಡಲಾಗಿದೆ. ಸುಮಾರು ೫೪ ರ ಪ್ರಾಯದ ಪ್ರಶಾಂತ್ ಕಳೆದ ಹಲವು ವರ್ಷಗಳಿಂದ ದಸರಾದ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಭಾಗವಹಿಸುತ್ತಿತ್ತು.
ಪ್ರಶಾಂತ್ ಸಾಕಾನೆಯ ಚಲನವಲನಗಳನ್ನು ಗಮನಿಸಿದ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಜವಾಗಿಯೇ ಸಂತಸ ವ್ಯಕ್ತಪಡಿಸಿದ್ದಾರೆ.
೧೯೯೪ ರಲ್ಲಿ ಸೋಮವಾರಪೇಟೆ ತಾಲೂಕಿನ ಯಡವನಾಡು ಅರಣ್ಯದಲ್ಲಿ ಸೆರೆಹಿಡಿದು ಕಾರೆಕೊಪ್ಪದಲ್ಲಿ ಪಳಗಿಸಿ ಹುದುಗೂರು ಸಾಕಾನೆ ಶಿಬಿರದಲ್ಲಿ ೨೦೦೫ ರವರೆಗೂ ಸಾಕಿ ಸಲಹಿ ನಂತರ ದುಬಾರೆಯ ಸಾಕಾನೆಯ ಶಿಬಿರದಲ್ಲಿ ವಾಸ್ತವ್ಯದಲ್ಲಿರುವ ಈ ಪ್ರಶಾಂತ ಆನೆ ಮೈಸೂರಿನ ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಬಾರಿ ಹೊರುವ ಅವಕಾಶ ಪಡೆದಿರುವುದು ದುಬಾರೆಯ ಸಾಕಾನೆ ಶಿಬಿರದ ಮಾವುತರಿಗೆ ಸಂತಸ ತಂದಿದೆ.
ಪ್ರಶಾAತ ಆನೆಯ ಮಾವುತ ಚಿನ್ನಪ್ಪ ಹಾಗೂ ಕಾವಾಡಿ ಚಂದ್ರ ಅವರಿಗಂತೂ ತಮ್ಮ ಲಾಲನೆ ಪಾಲನೆಯಲ್ಲಿರುವ ಪ್ರಶಾಂತ ಚಿನ್ನದ ಅಂಬಾರಿಯನ್ನು ಹೊರುವ ಸುವರ್ಣ ಅವಕಾಶ ಪಡೆದ ಸುದ್ದಿ ಕೇಳಿ ಅರಮನೆಯ ಸಾಕಾನೆಯ ತಾತ್ಕಾಲಿಕ ಶಿಬಿರದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.
ಸೋಮವಾರ ಚಿನ್ನದ ಅಂಬಾರಿ ಹೊರುವ ಆನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಶಾಂತ, ಧನಂಜಯ, ಸುಗ್ರೀವ ಹಾಗೂ ಏಕಲವ್ಯ ಮತ್ತಿತರ ಆರು ಸಾಕಾನೆಗಳ ಪೈಕಿ ಅಂತಿಮವಾಗಿ ಈ ಹಿಂದಿನ ವರ್ಷಗಳಲ್ಲಿ ಚಿನ್ನದ ಅಂಬಾರಿ ಮೆರವಣಿಗೆಯಲ್ಲಿ ಪ್ರಶಾಂತ ಸಾಕಾನೆಯ ಶಿಸ್ತು, ನಡತೆಯನ್ನು ಗಮನಿಸಿದ ಅರಣ್ಯ ಅಧಿಕಾರಿಗಳು ಅಂತಿಮವಾಗಿ ಪ್ರಶಾಂತ ಆನೆಯನ್ನು ಅಂತಿಮಗೊಳಿಸಿದ್ದಾರೆ.
ಮೈಸೂರು ದಸರಾದ ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಲು ದುಬಾರೆಯ ಸಾಕಾನೆ ಶಿಬಿರದಿಂದ ಪ್ರಶಾಂತ, ಕಾವೇರಿ, ಧನಂಜಯ, ಶ್ರೀರಾಮ, ಸುಗ್ರೀವಾ, ಗೋಪಿ ಎಂಬ ಆನೆಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ಕಳುಹಿಸಲಾಗಿತ್ತು. ತುಮಕೂರಿನಲ್ಲಿ ನಡೆಯುವ ದಸರಾದಲ್ಲಿ ಲಕ್ಷö್ಮಣ ಹಾಗೂ ಶ್ರೀರಂಗಪಟ್ಟಣ ದಸರಾದಲ್ಲಿ ಧನಂಜಯ ಆನೆಗಳು ಭಾಗವಹಿಸುತ್ತಿವೆ.
ಹುದುಗೂರು ವ್ಯಾಪ್ತಿಯ ನಿವಾಸಿಗಳ ಹರ್ಷ
ಪ್ರಶಾಂತ ಸಾಕಾನೆಯ ಮಾವುತ ಹುಣಸೆಪಾರೆಯ ಗಿಣಿಯಾ.
ಕಾವಾಡಿ ಹುದುಗೂರಿನ ವಾಸು. ಇಬ್ಬರು ಕೂಡ ಪಳಗಿಸಿದ್ದರು. ಕಾರೆಕೊಪ್ಪದಲ್ಲಿ ಪಳಗಿಸಿದ ಎಂಟು ಆನೆಗಳ ಪೈಕಿ ಪ್ರಶಾಂತ ಕೂಡ ಒಂದು. ಅರಣ್ಯಾಧಿಕಾರಿಯಾಗಿದ್ದ ಮೂಲೆ ಮಜಲು ನಂಜಪ್ಪ ಅಪ್ಪಾಜಿ ಅವರು ಆ ಸಂದರ್ಭ ಕರ್ತವ್ಯದಲ್ಲಿದ್ದರು.
ಇವರ ಪುಟ್ಟ ಮಗುವಿಗೆ ಇಟ್ಟಿದ್ದ ಪ್ರಶಾಂತ ಎಂಬ ಹೆಸರನ್ನೆ ಈ ಆನೆಗೂ ಇಟ್ಟಿದ್ದರು.
ಶಾಂತ ಸ್ವಭಾವದವನಾಗಿದ್ದ ಪ್ರಶಾಂತನನ್ನು ಹುದುಗೂರಿನಲ್ಲಿದ್ದಾಗ ಎಲ್ಲಿಯೂ ಕೂಡ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಬಳಕೆ ಮಾಡುತ್ತಿರಲಿಲ್ಲ.
ಬಿದ್ದ ಮರಗಳನ್ನು ತಂದು ಸಂಗ್ರಹಿಸಿಡುವ, ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ತಡೆಯಲು ಬೆಂಕಿ ಸಾಲು ಮಾಡಲು ಇದೇ ಪ್ರಶಾಂತನನ್ನು ಬಳಕೆ ಮಾಡುತ್ತಿದ್ದರು. ಮಾವುತ ಗಿಣಿಯಾ ನಿಧನದ ನಂತರ ಈತನ ಮಗ ರಾಜುಗೆ ಮಾವುತನ ಹೊಣೆ ನೀಡಲಾಗಿತ್ತು.
೨೦೦೫ ರಲ್ಲಿ ಹುದುಗೂರಿನಿಂದ ಕಾವೇರಿ ನಿಸರ್ಗಧಾಮಕ್ಕೆ ಸ್ಥಳಾಂತರಿಸಲಾಯಿತು. ರಾಜೇಂದ್ರ, ವಿಜಯ, ಕುಮಾರಸ್ವಾಮಿ, ಶೇಖರ ಹೀಗೆ ಒಟ್ಟು ೫ ಸಾಕಾನೆಗಳನ್ನು ಸ್ಥಳಾಂತರಿಸಲಾಯಿತು.
ರಾಜೇAದ್ರ ಹಾಗೂ ಶೇಖರ್ ಮತ್ತಿಗೋಡು ಆನೆ ಶಿಬಿರಕ್ಕೆ, ಕುಮಾರಸ್ವಾಮಿ ಆನೆಯನ್ನು ಚಾಮರಾಜನಗರದ ಬಳ್ಳೆ ಶಿಬಿರಕ್ಕೆ ಒಯ್ಯಲಾಯಿತು. ವಿಜಯನನ್ನು ಆನೆಕಾಡು ಶಿಬಿರಕ್ಕೆ ಒಯ್ಯಲಾಗಿತ್ತು.
ಪ್ರಶಾಂತ ಸಾಕಾನೆಯನ್ನು ಕಾವೇರಿ ನಿಸರ್ಗಧಾಮದ ಸಫಾರಿಗೆ ಬಳಕೆ ಮಾಡಲಾಗಿತ್ತು.
ಬಳಿಕ ಮಂಗಳೂರಿನ ಪಿಲಿಕುಳ ನಿಸರ್ಗ ಧಾಮಕ್ಕೆ, ಅಲ್ಲಿಂದ ನೇರವಾಗಿ ಮೈಸೂರು ದಸರಾಕ್ಕೆ ಬಳಕೆ ಮಾಡಲಾಗುತ್ತದೆ. ಈ ಸಂದರ್ಭ ಮಾವುತ ರಾಜುನನ್ನು ಬದಲಿಸಿ ಈಗಿನ ವಿಕ್ರಮ ಆನೆಯ, ಮಾವುತ ಪುಟ್ಟನಿಗೆ ಜವಬ್ದಾರಿ ವಹಿಸಲಾಗಿತ್ತು.
ಬಳಿಕ ಚಿನ್ನಪ್ಪ ಎಂಬ ಮಾವುತರಿಗೆ ವಹಿಸಲಾಯಿತು. ಚಿನ್ನದ ಅಂಬಾರಿ ಹೊರುವ ಜವಬ್ದಾರಿಯನ್ನು ಪ್ರಶಾಂತ ಆನೆಗೆ ವಹಿಸಿದ ಅರಣ್ಯಾಧಿಕಾರಿಗಳ ಕ್ರಮದ ಬಗ್ಗೆ ಹರ್ಷಚಿತ್ತರಾಗಿರುವ ಹುದುಗೂರು, ಯಡವನಾಡು ಹಾಗೂ ಕಾರೇಕೊಪ್ಪ ವ್ಯಾಪ್ತಿಯಲ್ಲಿನ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಪ್ರಶಾAತ ವಿಶ್ವವಿಖ್ಯಾತ ಮೈಸೂರು ದಸರಾದ ಚಿನ್ನದ ಅಂಬಾರಿಯನ್ನು ಹೊರುವ ಮೊಟ್ಟ ಮೊದಲ ಸುಂದರ ಕ್ಷಣಗಳನ್ನು ಕಣ್ಣು ತುಂಬಿಸಿಕೊಳ್ಳಬೇಕಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಹುದುಗೂರಿನ ಪರಿಸರ ಪ್ರೇಮಿ ಎಸ್.ರವಿ.
- ಕೆ.ಎಸ್. ಮೂರ್ತಿ