(ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಅ. ೧೨: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕರಡು ಮೀಸಲಾತಿ ಪಟ್ಟಿಯಲ್ಲಿ, ಕೊಡಗು ಜಿಲ್ಲೆಯ ಅಲ್ಪಸಂಖ್ಯಾತ ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಮಡಿಕೇರಿಯ ಕೂರ್ಗ್ ಹೋಟೆಲ್ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದರು.

ಸಭೆಯಲ್ಲಿ ಮೀಸಲಾತಿ ಕರಡು ಪಟ್ಟಿಯಲ್ಲಿ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಯಿತು. ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮತದಾರರಿರುವ ಕ್ಷೇತ್ರದಲ್ಲಿ, ಮೀಸಲಾತಿ ನಿಗದಿಯಲ್ಲಿ ಪ್ರಾತಿನಿಧ್ಯ ನೀಡದಿರುವುದಕ್ಕೆ ವಿರೋಧಿ ನಡೆ ಎಂದು ಮುಖಂಡರು ಆರೋಪಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸೂಕ್ತ ತಿದ್ದುಪಡಿ ಮಾಡಿ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಅದಲ್ಲದೇ ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಕನಿಷ್ಠ ೫ರಿಂದ ೬ ಸ್ಥಾನಗಳನ್ನು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. ಮೀಸಲಾತಿ ಪಟ್ಟಿಯಲ್ಲಿ ಅವಕಾಶ ಸಿಗದಿದ್ದರೆ, ಚುನಾವಣೆಯಲ್ಲಿ ಅಸಹಕಾರ ತೋರುವ ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಕೆ.ಯಾಕೂಬ್, ಕೊಡಗಿನಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮೀಸಲಾತಿ ಅಚ್ಚರಿ ಮೂಡಿದೆ. ಕೊಡಗಿನಲ್ಲಿ ಕನಿಷ್ಠ ಐದು ಕ್ಷೇತ್ರದಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಲ್ಪಸಂಖ್ಯಾತರಿಗೆ ನಿಲ್ಲುವಂತಹ ವ್ಯವಸ್ಥೆಯನ್ನು ಅಧ್ಯಕ್ಷರು, ಶಾಸಕರು ಮಾಡಿಕೊಡಬೇಕಿತ್ತು. ಅಲ್ಪಸಂಖ್ಯಾತರು ಹೆಚ್ಚು ಇರುವ ಭಾಗದಲ್ಲಿ ಮಾತ್ರ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನಮಗೆ ಗೆಲ್ಲೋದು ಸಾಧ್ಯ, ಬೇರೆ ಕಡೆ ನಮಗೆ ಗೆಲವು ಕಷ್ಟಸಾಧ್ಯ. ಅಲ್ಪಸಂಖ್ಯಾತರು ಬಹುಸಂಖ್ಯಾತರು ಎಲ್ಲಿ ನಿಂತರೂ ನಾವು ಮತ ಹಾಕುತ್ತೇವೆ. ಆದರೆ ಬಹುಸಂಖ್ಯಾತರು ನಮಗೆ ವೋಟ್ ಹಾಕುವ ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಕೆ.ಎ ಯಾಕೂಬ್ ಬೇಸರ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರು ಹೆಚ್ಚಿರುವ ೫ ಕ್ಷೇತ್ರಗಳಲ್ಲಿ ಗೆಲ್ಲುವ ವ್ಯವಸ್ಥೆ ಇದೆ. ಅದಕ್ಕೆ ಅನುವು ಮಾಡಿಕೊಡಬಹುದೆಂಬ ವಿಶ್ವಾಸ ನಮಗಿತ್ತು. ಆದರೆ ಇದೀಗ ನಮ್ಮ ವಿಶ್ವಾಸಕ್ಕೆ ಧಕ್ಕೆಯುಂಟಾಗಿದೆ.

ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲಾ ಮುಸ್ಲಿಂ ಬಾಂಧವರು ಒಂದು ಕಡೆ ಸೇರಿ ತೀರ್ಮಾನಕ್ಕೆ ಬರಬೇಕಾಗುತ್ತೆ. ಇಷ್ಟು ದಿನ ನಾವು ಇವರ ಜೊತೆ ಕೈ ಜೋಡಿಸಿ ವಿಶ್ವಾಸದಿಂದ ಬೆಳೆದು ಬಂದಿದ್ದೇವೆ. ಮೂರು ವರ್ಷದಲ್ಲಿ ನಮಗೆ ಯಾವುದೇ ಒಂದು ಅವಕಾಶವನ್ನೂ ಕೊಟ್ಟಿಲ್ಲ. ರಾಜ್ಯ ಮಟ್ಟದಲ್ಲಿ ಒಂದು ನಿಗಮ ಇರಬಹುದು, ಒಂದು ಎಂ.ಎಲ್.ಸಿ , ನಿಗಮ ಮಂಡಳಿ ಕೊಡಬೇಕು ಎಂದು ಗೆದ್ದ ತಕ್ಷಣ ನಾವೆಲ್ಲ ನಾಯಕರು ಸೇರಿ ಮನವಿ ಕೊಟ್ಟಿದ್ದೇವೆ. ಆದರೆ ಅದಕ್ಕೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಮೀಸಲಾತಿ ಪುನರ್ ಪರಿಶೀಲನೆ ಮಾಡದಿದ್ದರೆ ತಟಸ್ಥವಾಗಿ ಇರುವ ತೀರ್ಮಾನ ನಾವು ಖಂಡಿತ ಮಾಡ್ತೇವೆ ಯಾವುದೇ ಚುನಾವಣೆಯಲ್ಲಿ ನಾವು ಕೆಲಸ ಮಾಡಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ ಕೆ.ಎ ಯಾಕೂಬ್ ಹೇಳಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ ಲತೀಫ್ ಮಾತನಾಡಿ, ಈ ಬಾರಿ ಪ್ರಕಟಗೊಂಡಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕರಡು ಮೀಸಲಾತಿ ಪಟ್ಟಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ಸ್ಥಾನವನ್ನು ನೀಡಿಲ್ಲ. ಇದು ನಮಗೆ ಬಹಳ ಬೇಸರ ತಂದಿದೆ.

ನಮ್ಮ ಮುಸ್ಲಿಂ ಸಮುದಾಯ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೯೮% ರಿಂದ ೯೯% ಮತವನ್ನು ನೀಡಿದೆ. ಈ ಬಾರಿ ಜಿಲ್ಲೆಯಲ್ಲಿ ಎರಡು ಶಾಸಕರನ್ನು ಗೆಲ್ಲಿಸಲು ನಮ್ಮ ಸಮುದಾಯವೇ ಪ್ರಮುಖ ಕಾರಣ. ಅಷ್ಟೊಂದು ಬೆಂಬಲ ನೀಡಿದರೂ ನಮ್ಮನ್ನು ಕಡೆಗಣಿಸಿರುವುದು ಸರಿಯಲ್ಲ. ಆದ್ದರಿಂದ ನಾವು ಈ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಮತ್ತು ಮೇಲಧಿಕಾರಿಗಳಿಗೆ ಮನವಿ ಮಾಡುತ್ತೇವೆ, ನಮಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಲತೀಫ್ ಹೇಳಿದರು.

ಸಭೆಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಮಾಜಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ಟಿ.ಪಿ. ಹಮೀದ್, ಆದಂ ಸೋಮವಾರಪೇಟೆ, ಹಕೀಂ ನೆಲ್ಲಿಹುದಿಕೇರಿ, ಖಲೀಲ್ ಭಾಷಾ ಮಡಿಕೇರಿ, ರಫೀಕ್ ಖಾನ್, ಇಸಾಕ್ ಖಾನ್, ಖಾಲಿದ್ ಹಾಕತ್ತೂರು, ಹಮೀದ್ ಎಂ.ಎA. ಕಬಡಕೇರಿ, ಯೂಸುಫ್ ಅಲಿ, ಅಜೀಜ್ ನಾಪೋಕ್ಲು, ಅಬ್ದುಲ್ ರಜಾಕ್ ,ಕುಶಾಲನಗರ, ಮುಸ್ತಫಾ ಗರಗಂದೂರು, ಆದಂ ಮತ್ತಿತರರು ಇದ್ದರು.