ಮಡಿಕೇರಿ, ಅ. ೧೨: ಸಮಾಜದಲ್ಲಿ ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ, ಎಲ್ಲರಿಗೂ ಆಸೆ ಇರುತ್ತದೆ. ಇರುವದರಲ್ಲಿ ಖುಷಿ ಪಡೋಣ, ಕಷ್ಟದಲ್ಲಿ ಇರುವವರಿಗೆ ಖುಷಿಯನ್ನು ಹಂಚೋಣ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಏರ್ಪಡಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಸರಾ ಸಮಿತಿಯ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಈ ಬಾರಿಯ ದಸರಾ ಉತ್ಸವಕ್ಕೆ ಸರಕಾರದಿಂದ ರೂ.೨ ಕೋಟಿ ಅನುದಾನ ಬಂದಿದೆ. ಎಷ್ಟು ಹಣ ಇದ್ದರೂ ಸಾಲದು, ನಿನ್ನೆ ಕರಗ ಉತ್ಸವದೊಂದಿಗೆ ದಸರಾ ಆರಂಭಗೊAಡಿದೆ. ಅವಕಾಶ ಕೋರಿ ಸಾಕಷ್ಟು ಬೇಡಿಕೆಗಳು ಬರುತ್ತವೆ, ಸಾಧ್ಯವಾಗುವಷ್ಟೇ ನೀಡಲು ಸಾಧ್ಯ, ಸಿಕ್ಕುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಯಾವದೇ ಕಾರ್ಯ ಕ್ರಮಗಳಾದರೂ ಕಾರ್ಯಕ್ರಮಗಳಲ್ಲಿ ಹೆಚ್ಚು ಕಮ್ಮಿ ಆಗಲಿದೆ. ಕೆಟ್ಟದನ್ನು ದೂರ ಮಾಡಿ ಒಳ್ಳೆಯ ಕೆಲಸ ಮಾಡೋಣ. ದೇವರು ಸಾರ್ವಜನಿಕ ಕೆಲಸ ಮಾಡಲು ಅವಕಾಶ ಮಾಡಿಕೊಡಲಿ, ಸ್ವಚ್ಛತೆ ಕಾಪಾಡಿಕೊಂಡು ದಸರಾ ಆಚರಣೆ ಮಾಡೋಣವೆಂದರು.
ತಾ.೧೪ರಂದು ಕಾಫಿ ದಸರಾ ಆರಂಭವಾಗಲಿದ್ದು. ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವದು. ಪ್ರತಿದಿನ ಬೇರೆ ಬೇರೆ ಕಾರ್ಯಕ್ರಮಗಳಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು, ಆಯುಧ ಪೂಜೆಯಂದು ಗಾಯಕರುಗಳಾದ ಅನನ್ಯ ಭಟ್, ವಾಸುಕಿ ವೈಭವ್ ಅವರುಗಳು ಆಗಮಿಸಲಿದ್ದಾರೆ, ಎಲ್ಲರೂ ಸಹಕರಿಸುವಂತೆ ಕೋರಿದರು.
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಚೆನ್ನಾಗಿ ಮೂಡಿ ಬರಲಿ, ಕೊಡಗು ಜಿಲ್ಲೆಯ ಸಂಸ್ಕೃತಿ ವಿಭಿನ್ನವಾಗಿದ್ದು, ಬಿಂಬಿಸುವ ಕೆಲಸವಾಗಬೇಕು. ಎಲ್ಲರಿಗೂ ಅವಕಾಶ ಸಿಗುವಂತಾಗಲಿ ಎಂದು ಹೇಳಿದರು.
ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷ ಮಹೇಶ್ ಜೈನಿ ದಸರಾ ಆಚರಣೆ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದಶ ಮಂಟಪ ಸಮಿತಿ ಅಧ್ಯಕ್ಷ ಪಾಂಡಿರ ಪೂಣಚ್ಚ, ದಸರಾ ಸಮಿತಿ ಪದಾಧಿಕಾರಿಗಳು, ನಗರಸಭಾ ಸದಸ್ಯರುಗಳು ಇದ್ದರು. ಕಲಾವಿದ ಡಾ. ಕಾ. ರಾಮೇಶ್ವರಪ್ಪ ತಂಡದವರು ವಂದೇ ಮಾತರಂ, ನಾಡಗೀತೆ ಹಾಡಿದರು. ಗೊಂಬೆ ಪೊನ್ನಮ್ಮ ಹಾಗೂ ವಸಂತಿ ಪ್ರಾರ್ಥಿಸಿದರೆ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಸ್ವಾಗತಿಸಿದರು. ಖಜಾಂಚಿ ಬಾಳೆಯಡ ಸಬಿತಾ ವಿಜಯ್ ವಂದಿಸಿದರು.