ಪೊನ್ನಂಪೇಟೆ, ಅ. ೧೨: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಲೆಮಾಡ ಒಕ್ಕ ಆಯೋಜಿಸಿದ್ದ ಎರಡನೇ ವರ್ಷದ ಕೊಡವ ಕೌಟುಂಬಿಕ ತೋಕ್ ನಮ್ಮೆಗೆ ವರ್ಣ ರಂಜಿತ ತೆರೆ ಎಳೆಯಲಾಯಿತು. ಕ್ರೀಡಾಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಆಲೆಮಾಡ ತೋಕ್ ನಮ್ಮೆಯ ಚಾಂಪಿಯನ್ ಆಗಿ ಚೌಂಡಿರ ಕುಟುಂಬ ಹೊರ ಹೊಮ್ಮಿದರೆ, ಬಡುವಂಡ ಕುಟುಂಬ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಚೌಂಡಿರ ಮಾಚಯ್ಯ ಮತ್ತು ಭೀಮಯ್ಯ (ಅಪ್ಪ ಮಗನ ಜೋಡಿ) ಉತ್ತಮ ಗುರಿ ಪ್ರದರ್ಶನ ತೋರುವ ಮೂಲಕ ತಮ್ಮ ಕುಟುಂಬಕ್ಕೆ ಜಯತಂದುಕೊಟ್ಟರು.

ಗೆಲುವಿಗಾಗಿ ಉತ್ತಮ ಸ್ಪರ್ಧೆ ನೀಡಿದ ಬಡುವಂಡ ಧನು ದೇವಯ್ಯ ಮತ್ತು ತ್ರಿಶಾಲಿ ತಂಗಮ್ಮ (ಅಪ್ಪ ಮಗಳ ಜೋಡಿ) ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಚೇನಂಡ ಸಚಿನ್ ಅಯ್ಯಪ್ಪ ಹಾಗೂ ಬೋಪಣ್ಣ ಜೋಡಿ ೩ ನೇ ಸ್ಥಾನ, ಚೋನಿರ ಸಜನ್ ಉತ್ತಪ್ಪ ಹಾಗೂ ಸೋಮಣ್ಣ ಜೋಡಿ ೪ ನೇ ಸ್ಥಾನ, ಜಮ್ಮಡ (ಕೈಕೇರಿ )ಕರಣ್ ಹಾಗೂ ಪೊನ್ನಪ್ಪ ಜೋಡಿ ೫ನೇ ಸ್ಥಾನ, ಅಪ್ಪಂಡೇರAಡ ಬೋಪಣ್ಣ ಹಾಗೂ ರಜನೀಶ್ ಜೋಡಿ ೬ ನೇ ಸ್ಥಾನ ಪಡೆದುಕೊಂಡಿತು.

ಚಾAಪಿಯನ್ ತಂಡಕ್ಕೆ ರೂ. ೬೦,೦೦೦, ರನ್ನರ್ಸ್ ತಂಡಕ್ಕೆ ರೂ. ೫೦,೦೦೦, ೩ ನೇ ಸ್ಥಾನಕ್ಕೆ ರೂ. ೪೦,೦೦೦, ೪ನೇ ಸ್ಥಾನಕ್ಕೆ ೩೦,೦೦೦, ೫ ನೇ ಸ್ಥಾನಕ್ಕೆ ರೂ. ೨೦,೦೦೦ ಹಾಗೂ ಟ್ರೋಫಿ ನೀಡಲಾಯಿತು. ೬ನೇ ಸ್ಥಾನ ಪಡೆದ ತಂಡಕ್ಕೆ ದಿ. ಚೀರಂಡ ಕಂದ ಸುಬ್ಬಯ್ಯ ಜ್ಞಾಪಕಾರ್ಥವಾಗಿ ಅವರ ಪತ್ನಿ ರೂಪ ಹಾಗೂ ಪುತ್ರ ಅಯ್ಯಪ್ಪ ಅವರ ವತಿಯಿಂದ ರೂ. ೧೦,೦೦೦ ಬಹುಮಾನ ನೀಡಲಾಯಿತು.

ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಬಡುವಂಡ ಶ್ಲೋಕ್ ಸುಬ್ಬಯ್ಯ ಪ್ರಥಮ (ರೂ.೧೦,೦೦೦), ಬಡುವಂಡ ಧನು ದೇವಯ್ಯ ದ್ವಿತೀಯ (ರೂ.೭,೫೦೦), ಚೆಪ್ಪುಡೀರ ದರ್ಶನ್ ಬೆಳ್ಳಿಯಪ್ಪ (ರೂ.೫,೦೦೦) ನಗದು ಹಾಗೂ ಟ್ರೋಫಿ ಪಡೆದುಕೊಂಡರು.

ವಿಶೇಷ ಪ್ರಶಸ್ತಿಗಳು

ಉತ್ತಮವಾಗಿ ನಿರ್ವಹಿಸಲಾದ ಕೋವಿ ಬಳಸಿದ ಸ್ಪರ್ಧಾಳು ಆಗಿ ಬಡುವಂಡ ಧನು ದೇವಯ್ಯ, ಹಿರಿಯ ಪುರುಷ ಶೂಟರ್ ಆಗಿ ಬುಟ್ಟಿಯಂಡ ಚಿಮ್ಮಿ ಪೂಣಚ್ಚ, ಹಿರಿಯ ಮಹಿಳಾ ಶೂಟರ್ ಆಗಿ ಪಾರುವಂಗಡ ರೋಹಿಣಿ ಭೀಮಯ್ಯ, ಉದಯೋನ್ಮುಖ ಶೂಟರ್ ಆಗಿ ಚೊಟ್ಟೆಕಾಳಪಂಡ ಅಪ್ಪಣ್ಣ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ ಸಮಾರಂಭ

ಆಲೆಮಾಡ ಒಕ್ಕಡ ಅಧ್ಯಕ್ಷ ಎ.ಎನ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹಾಕಿ ಒಲಿಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕೊಡವ ಪದ್ಧತಿ ಮತ್ತು ಪರಂಪರೆಯ ಪ್ರಮುಖ ಭಾಗವಾಗಿರುವ ಕೋವಿಯ ಕುರಿತು ಚಿಕ್ಕ ಮಕ್ಕಳಿಗೂ ಅರಿವು ಮೂಡಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಿಂದ ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳ ಸಂಖ್ಯೆ ವಿರಳವಾಗುತ್ತಿದ್ದು, ಪೋಷಕರು ಈ ಬಗ್ಗೆ ಗಮನಹರಿಸಿ, ಮಕ್ಕಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕಳೇರ ಕುಶಾಲಪ್ಪ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ಕೊಡವ ಸಂಸ್ಕೃತಿ ಮತ್ತು ಕ್ರೀಡಾ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.

ಇದೇ ಸಂದರ್ಭ ಕೊಡಗಿನ ಕ್ರೀಡಾ ಪ್ರೋತ್ಸಾಹಕ, ವಿಶ್ಲೇಷಕ, ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪಅವರನ್ನು ಸನ್ಮಾನಿಸಲಾಯಿತು. ತೋಕ್ ನಮ್ಮೆಯ ಯಶಸ್ವಿಗೆ ಲೆನ್ಸ್ ಅಂಡ್ ಲೆಗೆಸಿ ಸಂಸ್ಥೆ, ಮಾರ್ಕ್ಸ್ಮೆನ್ ಅಸೋಸಿಯೇಷನ್ ಅವರು ಸಹಕಾರ ನೀಡಿದರು.

ಮಂಡೀರ ಒಕ್ಕಕ್ಕೆ ರೋಲಿಂಗ್ ಟ್ರೋಫಿ ಹಸ್ತಾಂತರ

೨೦೨೭ರಲ್ಲಿ ತೋಕ್ ನಮ್ಮೆಯನ್ನು ಮಂಡೀರ ಒಕ್ಕ ಆಯೋಜಿಸಲಿದ್ದು, ಅವರನ್ನು ಆಲೆಮಾಡ ಒಕ್ಕದವರು ಒಡ್ಡೋಲಗ, ಪುಷ್ಪ ವೃಷ್ಟಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ತೋಕ್ ನಮ್ಮೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿ ರೋಲಿಂಗ್ ಟ್ರೋಫಿಯನ್ನು ಹಸ್ತಾಂತರಿಸಲಾಯಿತು. ಹೆಚ್ಚು ತಂಡಗಳು ಪಾಲ್ಗೊಳುವ ಹಿನ್ನೆಲೆಯಲ್ಲಿ ತೋಕ್ ನಮ್ಮೆಯನ್ನು ಎರಡು ದಿನಗಳ ಬದಲು, ಮುಂದಿನ ವರ್ಷಗಳಲ್ಲಿ ಹೆಚ್ಚಿನ ದಿನಗಳವರೆಗೆ ವಿಸ್ತರಿಸಲು ಸಮಿತಿಯ ವತಿಯಿಂದ ಮನವಿ ಮಾಡಲಾಯಿತು.

ಈ ಸಂದರ್ಭ ಆಲೆಮಾಡ ಒಕ್ಕಡ ಹಿರಿಯರಾದ ಬಬ್ಬು ಕಾರ್ಯಪ್ಪ ಹಾಗೂ ಕಾಫಿ ಬೆಳೆಗಾರ್ತಿ ಆಲೆಮಾಡ ಲಲಿತಾ ಶ್ರೀನಿವಾಸ್, ಆಲೆಮಾಡ ತೋಕ್ ನಮ್ಮೆ ಸಮಿತಿಯ ಅಧ್ಯಕ್ಷ ಎ.ಟಿ. ಸೋಮಣ್ಣ, ಉಪಾಧ್ಯಕ್ಷ ಎ.ಡಿ. ಸುಧೀರ್, ಕಾರ್ಯದರ್ಶಿ ಎ.ಟಿ. ಬೋಪಣ್ಣ, ಖಜಾಂಚಿ ಡಾ. ಎ.ಜಿ. ತಿಮ್ಮಯ್ಯ, ನವೀನ್ ದೇವಯ್ಯ, ರೋಷನ್ ಉತ್ತಪ್ಪ, ಕೀರ್ತನ್ ತಮ್ಮಯ್ಯ, ಜಗತ್ ನಾಚಪ್ಪ, ಸೋಮಣ್ಣ, ವಿನು, ಸುತನ್, ವಿಬಿನ್, ವಿತನ್, ಭವನ್, ಸುಧೀರ್, ಬೋಪಣ್ಣ, ಪ್ರಶಾಂತ್, ಪ್ರಖ್ಯಾತ್ ಸೇರಿದಂತೆ ಒಕ್ಕಡ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಆಲೆಮಾಡ ಕುಟುಂಬಸ್ಥರು, ತಾಮನೆ ಮಹಿಳೆಯರು, ಕ್ರೀಡಾಪಟುಗಳು, ಕೊಡವ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆಲೇಮಾಡ ಲಿಲ್ಲಿ ಪ್ರಾರ್ಥಿಸಿ, ರೇಷ್ಮಾ ಸ್ವಾಗತಿಸಿ, ಡಾ.ಕೀರ್ತನ್ ತಮ್ಮಯ್ಯ ವಂದಿಸಿ, ಗಾಯತ್ರಿ ತಿಮ್ಮಯ್ಯ, ರೀನಾ ರೋಷನ್ ನಿರೂಪಿಸಿದರು.

ತೋಕ್ ನಮ್ಮೆಯ ವಿಶೇಷತೆಗಳು

ಆಲೆಮಾಡ ತೋಕ್ ನಮ್ಮೆಯಲ್ಲಿ ಹಲವು ವಿಶೇಷತೆಗಳು ಗಮನ ಸೆಳೆದವು. ಎರಡನೇ ದಿನ ಕೊಡವ ವಧು-ವರರ ತಂದ್ ಬೆಂದ್ ಕಾರ್ಯವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ೧೨ ಮಕ್ಕಳ ಹೆಸರನ್ನು ಅವರ ತಂದೆ-ತಾಯಿಯರು ನೋಂದಾಯಿಸಿದ್ದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ಒಂಬತ್ತು ಪತಿ-ಪತ್ನಿ ಜೋಡಿಗಳು ಭಾಗವಹಿಸಿ ಗಮನ ಸೆಳೆದರು.

೯೪ ವರ್ಷದ ಹಿರಿಯ ಗುರಿಗಾರ್ತಿ ಪಾರುವಂಗಡ ರೋಹಿಣಿ ಭೀಮಯ್ಯ ಅವರನ್ನು ಸನ್ಮಾನಿಸಲಾಯಿತು. ಮೈದಾನದ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಆಹಾರ ಸಮಿತಿಯ ಆಲೆಮಾಡ ರೋಷನ್ ಉತ್ತಪ್ಪ ಹಾಗೂ ನವೀನ್ ದೇವಯ್ಯ ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಮೆಚ್ಚುಗೆ ಪಡೆದುಕೊಂಡರು. ಆಲೆಮಾಡ ಸುತನ್ ಅಯ್ಯಪ್ಪ, ಮುದ್ದಿಯಡ ಮಂಜು ಗಣಪತಿ , ಅಜ್ಜಿಕುಟ್ಟಿರ ರಂಜಿ, ಆಲೆಮಾಡ ಚರ್ಮಣ, ನೆಲ್ಲಮಕ್ಕಡ ಶರತ್ ಸೋಮಣ್ಣ, ತಡಿಯಂಗಡ ಕಂಬ, ಕೊಟ್ಟಂಗಡ ಭೀಮಯ್ಯ ಹಾಗೂ ಇತರರು ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ

ನೀಡಿ ಪ್ರೋತ್ಸಾಹಿಸಿದರು.

-ಚನ್ನನಾಯಕ