ಸಿದ್ದಾಪುರ, ಅ. ೯: ವಿಸ್ಡ್ಂ ಇಸ್ಲಾಮಿಕ್ ಆರ್ಗನೈಸೇಶನ್ ವತಿಯಿಂದ ನೆಲ್ಲಿಹುದಿಕೇರಿ ಗ್ರಾಮದ ಶಾದಿ ಮಹಲ್ ಸಭಾಂಗಣದಲ್ಲಿ ಅಮಲು ಮುಕ್ತ ಸಮಾಜ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಪ್ರಾರಂಭವಾಗಿ ವಯಸ್ಕರ ಹೊರಗೆ ಅಮಲು ಪದಾರ್ಥಗಳನ್ನು ಬಳಸುತ್ತಿರುವುದು ಕಂಡು ಬಂದಿದ್ದು, ಇದು ದೊಡ್ಡ ದುರಂತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಮಲು ಪದಾರ್ಥಗಳ ವಿರುದ್ಧ ಪ್ರತಿಯೊಬ್ಬ ನಾಗರಿಕನು ಜಾಗೃತರಾಗಬೇಕೆಂದು ಕರೆ ನೀಡಿದರು. ಅಮಲು ಪದಾರ್ಥಗಳನ್ನು ಬಳಸದಂತೆ ಪೋಷಕರು ತಮ್ಮ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಹಾಗೂ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.

ಪೊಲೀಸ್ ಇಲಾಖೆ ವತಿಯಿಂದ ಗಾಂಜಾ ಸೇರಿದಂತೆ ಇನ್ನಿತರ ಅಮಲು ಪದಾರ್ಥಗಳ ಬಳಕೆಯ ವಿರುದ್ಧ ಶಾಲೆ - ಕಾಲೇಜುಗಳಲ್ಲಿ ಈಗಾಗಲೇ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮಂಜುನಾಥ ಮಾಹಿತಿ ನೀಡಿದರು.

ಮಾದಕ ವಸ್ತುಗಳನ್ನು ಬಳಸುವುದು ಹಾಗೂ ಅದನ್ನು ಮಾರಾಟ ಮಾಡುವ ಮಾಹಿತಿಗಳು ಲಭಿಸಿದಲ್ಲಿ ಪೊಲೀಸ್ ಇಲಾಖೆಗೆ ತಿಳಿಸುವಂತೆ ಹಾಗೂ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ನೀಡಿದಂತೆ ನೀಡಿದ್ದಲ್ಲಿ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ವಿಸ್ಡಂ ಇಸ್ಲಾಮಿಕ್ ಆರ್ಗನೈಸೇಶನ್ ಜಿಲ್ಲಾ ಅಧ್ಯಕ್ಷ ಹನೀಫ್ ಸುಂಟಿಕೊಪ್ಪ, ಕಾರ್ಯದರ್ಶಿ ಪಿ.ಎಂ. ಶಮೀರ್, ಮೌಲವಿ ಮುಜಾಹಿದ್ ಬಾಲುಶ್ಶೇರಿ, ಇನ್ನಿತರರು ಹಾಜರಿದ್ದರು. ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶುಕೂರ್ ಕೆ.ಸಿ. ಸ್ವಾಗತಿಸಿ, ಅಸ್ಲಂ ನಜಾತಿ ವಂದಿಸಿದರು.