ವೀರಾಜಪೇಟೆ, ಅ. ೭: ಸೊಪ್ಪು ಕುಯ್ಯಲು ಮರವೇರಿದ ವ್ಯಕ್ತಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ವೀರಾಜಪೇಟೆ ಹೊರವಲಯದ ಪೆಗ್ಗರಿಕಾಡಿನಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡು ಪೈಸಾರಿ ನಿವಾಸಿ ಪಣಿ ಎರವರ ಬೋಜ (೪೮) ಮೃತ ವ್ಯಕ್ತಿ.

ಕಾರ್ಮಿಕರಾಗಿದ್ದ ಬೋಜ ಅವರು ಸ್ಥಳೀಯ ಸತೀಶ್ ಎಂಬವವರ ತೋಟಕ್ಕೆ ಕೆಲಸದ ನಿಮಿತ್ತ ತೆರಳಿದ್ದರು. ತೋಟದಲ್ಲಿದ್ದ ಮರವನ್ನು ಏರಿ ಸೊಪ್ಪು ಕುಯ್ಯಲು ಮುಂದಾಗಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಪ್ರಶಾಂತ್ ಹಾಗೂ ಸಜೀತ್ ಅವರು ಮರ ಹತ್ತದಂತೆ ಬೋಜ ಅವರಿಗೆ ಸೂಚಿಸಿದ್ದರೂ, ಅವರ ಮಾತನ್ನು ಲೆಕ್ಕಿಸದೆ ಮರ ಹತ್ತಿದ ಸಂದರ್ಭ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ನೆಲಕ್ಕೆ ಬಿದ್ದು ನರಳಾಡುತ್ತಿದ್ದ ಬೋಜ ಅವರನ್ನು ಸ್ಥಳೀಯರು ಕೂಡಲೇ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ಮೃತರ ಪುತ್ರ ಚಂದ್ರಕಾAತ್ ನೀಡಿದ ದೂರಿನ ಆಧಾರದ ಮೇಲೆ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆಕಸ್ಮಿಕ ಮರಣ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. - ಕಿಶೋರ್ ಕುಮಾರ್ ಶೆಟ್ಟಿ