*ಗೋಣಿಕೊಪ್ಪ, ಅ. ೬: ಭಾರತದ ಜೇನು ಗುಣಮಟ್ಟದಿಂದ ಕೂಡಿದ್ದು, ವಿದೇಶಗಳಲ್ಲಿಯೂ ಬೇಡಿಕೆ ಹೆಚ್ಚುತ್ತಿದೆ. ಯುವ ಸಮುದಾಯ ಜೇನು ಕೃಷಿಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ. ನಾರಾಯಣಸ್ವಾಮಿ ಕರೆ ನೀಡಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಕೊಡಗು ಜಿಲ್ಲಾ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜೇನು ಕೃಷಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಜೇನಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ದೇಶದಲ್ಲಿ ವಾರ್ಷಿಕವಾಗಿ ಸುಮಾರು ೧.೫೬ ಲಕ್ಷ ಮೆಟ್ರಿಕ್ ಟನ್ ಜೇನು ಉತ್ಪಾದನೆಯಾಗುತ್ತಿದೆ. ಇದರಲ್ಲಿ ಸುಮಾರು ೧ಲಕ್ಷದ ೪ ಸಾವಿರ ಮೆಟ್ರಿಕ್ ಟನ್ ಜೇನನ್ನು ಏಷ್ಯಾ ಹಾಗೂ ಯುರೋಪ್ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಜೇನು ಕೃಷಿ ರೈತರ ಆರ್ಥಿಕ ಸ್ವಾವಲಂಬನೆಗೆ ಉತ್ತಮ ಅವಕಾಶ ಕಲ್ಪಿಸುತ್ತದೆ
ಜೇನುನೊಣಗಳು ಕೇವಲ ಜೇನು ಉತ್ಪಾದಿಸುವ ಕೀಟಗಳಲ್ಲ. ಅವು ಪರಿಸರ ಸಮತೋಲನದ ಪ್ರಮುಖ ಭಾಗವಾಗಿವೆ. ಜೇನುನೊಣಗಳ ಸಂಖ್ಯೆ ಕ್ಷೀಣಿಸಿದರೆ ಪ್ರಕೃತಿಯ ಸಮತೋಲನದ ಮೇಲೆ ಪರಿಣಾಮ ಬೀರುವುದಲ್ಲದೆ, ಕೃಷಿ ಉತ್ಪಾದನೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಪರಾಗಸ್ಪರ್ಶದ ಮೂಲಕ ಬೆಳೆಗಳ ಇಳುವರಿ ಹಾಗೂ ಗುಣಮಟ್ಟ ಹೆಚ್ಚಿಸಲು ಜೇನುನೊಣಗಳು ಮಹತ್ವದ ಪಾತ್ರ ವಹಿಸುತ್ತವೆ. ಜೇನುನೊಣಗಳ ನಾಶದಿಂದ ಕೃಷಿ ಇಳುವರಿ ಕುಂಠಿತವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ವೈಜ್ಞಾನಿಕ ಪದ್ಧತಿಯಲ್ಲಿ ಜೇನು ಕೃಷಿ ಕೈಗೊಂಡರೆ ರೈತರಿಗೆ ಹೆಚ್ಚುವರಿ ಆದಾಯದ ಜೊತೆಗೆ ಆರ್ಥಿಕ ಭದ್ರತೆ ಒದಗಿಸಬಹುದು. ಕೃಷಿಯೊಂದಿಗೆ ಜೇನು ಕೃಷಿಯನ್ನು ಸಂಯೋಜಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಬಹುದು ಎಂದರು.
ಕೇAದ್ರ ಸರ್ಕಾರ ಐದು ವರ್ಷಗಳ ಯೋಜನೆಯಡಿ ಜೇನು ಕೃಷಿಗೆ ರೂ. ೫೦೦ ಕೋಟಿ ಅನುದಾನ ಮೀಸಲಿಟ್ಟು, ದೇಶದಾದ್ಯಂತ ಜೇನು ಕೃಷಿಗೆ ಉತ್ತೇಜನ ನೀಡುತ್ತಿದೆ. ರಾಜ್ಯ ಸರ್ಕಾರವೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಜೇನು ಕೃಷಿ ಅಭಿವೃದ್ಧಿಗೆ ರೂ. ೧ ಕೋಟಿ ಅನುದಾನ ನೀಡಿದೆ. ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕಾಲೇಜು ಆವರಣದಲ್ಲಿ ‘ಬೀ ಪಾರ್ಕ್’ ಹಾಗೂ ಹನಿ ಸೆಕ್ಟರ್ ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಡಾ. ಲಿಂಗದೊರೈ ಮಾತನಾಡಿ, ಜೇನು ಕೃಷಿಯ ಮೂಲಕ ಯುವಕರಿಗೆ ಉದ್ಯೋಗ ಹಾಗೂ ರೈತರಿಗೆ ಸ್ವಾವಲಂಬಿ ಬದುಕಿನ ಅವಕಾಶ ಕಲ್ಪಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಜೇನು ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ ತರಬೇತಿ ನೀಡಿ, ಜೇನುಪೆಟ್ಟಿಗೆ ಹಾಗೂ ಜೇನು ನೊಣಗಳ ವಸಾಹತುಗಳನ್ನು ವಿತರಿಸಲಾಗುತ್ತಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕೊಡಗು ಜಿಲ್ಲಾ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಸಂಯೋಜಕ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಡಾ. ಆರ್.ಎನ್. ಕೆಂಚರೆಡ್ಡಿ ಮಾತನಾಡಿ, ಜೇನು ಕೃಷಿಯ ಉಪಯೋಗ, ರೈತರಿಗೆ ದೊರೆಯುವ ಆರ್ಥಿಕ ಲಾಭ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯಮಟ್ಟದ ಜೇನು ಕೃಷಿಕರ ಸಮಾವೇಶ ಆಯೋಜಿಸಲಾಗಿದೆ. ಇತರ ಕೃಷಿ ಚಟುವಟಿಕೆಗಳೊಂದಿಗೆ ಜೇನು ಕೃಷಿಯನ್ನೂ ಕೈಗೊಂಡರೆ ರೈತರ ಆರ್ಥಿಕ ಸದೃಢತೆಗೆ ಹೆಚ್ಚಿನ ಬಲ ಸಿಗಲಿದೆ ಎಂದರು.
ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಜಿ.ಎಂ. ದೇವಾಗಿರಿ ಹಾಗೂ ವಿಶೇಷ ಆಹ್ವಾನಿತರಾಗಿ ಕೇಂದ್ರ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ರಾಜ್ಯ ನಿರ್ದೇಶಕ ಡಾ. ಮೋಹನರಾವ್ ಉಪಸ್ಥಿತರಿದ್ದರು. ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ರಾಮಚಂದ್ರ ಸಿ. ಅಧ್ಯಕ್ಷತೆ ವಹಿಸಿದ್ದರು. ಜೇನುಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ, ಮಾಡುತ್ತಿರುವ ಕೋಲಾರ ಜಿಲ್ಲೆಯ ರಾಜಪ್ಪ, ಶಿವಮೊಗ್ಗ ಜಿಲ್ಲೆಯ ಕಾರ್ತಿಕ, ಚಿಕ್ಕಮಗಳೂರು ಜಿಲ್ಲೆಯ ಚಂದ್ರಶೇಖರ್, ವೀರಾಜಪೇಟೆಯ ಮಾಝರ್ ಮಝಿರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯದ ವಿವಿಧ ಭಾಗಗಳಿಂದ ನೂರಾರು ಪ್ರಗತಿಪರ ಜೇನು ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊಡಗಿನ ಜೇನು ಕೃಷಿಕರು, ಜೇನುಕೃಷಿ ಆಸಕ್ತರು, ಜೇನುಕೃಷಿಯ ವ್ಯಾಪಾರೋದ್ಯಮಿಗಳು ಪಾಲ್ಗೊಂಡು ಮಾಹಿತಿ ಪಡೆದರು. ಡಾ. ಹೇಮಂತ್ ಕುಮಾರ್ ವಂದಿಸಿದರು.