ಸುಂಟಿಕೊಪ್ಪ, ಅ. ೫ : ರಾಷ್ಟç ನಿರ್ಮಾಣ ಕಾರ್ಯದಲ್ಲಿ ಯುವ ಜನರು ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡುವುದೇ ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್.) ಉದ್ದೇಶವಾಗಿದೆ ಎಂದು ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಕೆ.ಪಿ.ಚಂದ್ರ ಹೇಳಿದರು.
ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಏರ್ಪಡಿಸಿದ್ದ ಎನ್.ಎಸ್.ಎಸ್. ಸಂಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎನ್ನೆಸ್ಸೆಸ್ ಸಂಸ್ಥೆಯು ಯುವಜನಾಂಗದಲ್ಲಿ ನಿಸ್ವಾರ್ಥ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಅಭಿವೃದ್ಧಿಯನ್ನು ಉತ್ತೇಜಿಸುವ ಸಂಸ್ಥೆಯಾಗಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಮೂಲಕ ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಹಾಗು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವವನ್ನು ವಿಕಸನ ಗೊಳಿಸಿದರೆ ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಚಂದ್ರ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ. ಜಿ. ಮಂದಪ್ಪ ಮಾತನಾಡಿ, ಎನ್.ಎಸ್.ಎಸ್. ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವೆ, ಸಮುದಾಯ ಭಾಗವಹಿಸುವಿಕೆ, ಶಿಸ್ತು ಮತ್ತು ಸಮಾಜದ ಕಡೆಗೆ ಜವಾಬ್ದಾರಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕಿ ರಮ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಕೆ.ಯು.ರೀಟಾ, ಎನ್ನೆಸ್ಸೆಸ್ ಅಧಿಕಾರಿ ಮನೋಹರ ಹಾಗೂ ಸಂಸ್ಥೆಯ ಉಪನ್ಯಾಸಕರು ಇದ್ದರು. ಕುಮಾರಿ ಮಾನಸ ಸ್ವಾಗತಿಸಿ, ಕುಮಾರಿ ಹನಿ ವಂದಿಸಿದರು. ಕುಮಾರಿ ಸುಕನ್ಯ ನಿರೂಪಿಸಿದರು.