ಸೋಮವಾರಪೇಟೆ, ಅ. ೫: ಭಾರತೀಯ ಸೇನೆಯಲ್ಲಿ ಸುದೀರ್ಘ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಶಾಂತಳ್ಳಿಯ ಕೆ.ಪಿ. ಲೋಕೇಶ್ ಅವರಿಗೆ ಗ್ರಾಮಸ್ಥರು ಹೃದಯಸ್ಪರ್ಶಿ ಸ್ವಾಗತ ಕೋರಿ, ಸನ್ಮಾನಿಸಿದರು.

ಶಾಂತಳ್ಳಿ ಗ್ರಾಮದ ಕೆ.ಪಿ. ಲೋಕೇಶ್ ಅವರು ೨೫ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಸಂದರ್ಭ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು, ನಿವೃತ್ತ ಯೋಧರನ್ನು ಸನ್ಮಾನಿಸಿದರು.

ಈ ಸಂದರ್ಭ ಮಾತನಾಡಿದ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್, ಭಾರತದ ರಕ್ಷಣೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದೀರ್ಘ ಕಾಲ ಕರ್ತವ್ಯ ನಿರ್ವಹಿಸಿದ ಲೋಕೇಶ್ ಅವರ ಸೇವೆ ಸದಾ ಸ್ಮರಣೀಯ. ನಿವೃತ್ತ ಯೋಧರಿಗೆ ಸಮಾಜ ಗೌರವ ನೀಡಬೇಕು. ಅವರ ಅನುಭವಗಳನ್ನು ತಿಳಿದುಕೊಳ್ಳಬೇಕು. ಯುವ ಜನಾಂಗಕ್ಕೆ ನಿವೃತ್ತ ಯೋಧರು ಮಾರ್ಗದರ್ಶನ ನೀಡುವಂತಾಗಬೇಕು ಎಂದರು.

ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಪ್ರಮುಖರಾದ ರಾಮಚಂದ್ರ, ಸುಬ್ಬಯ್ಯ, ಮುತ್ತಣ್ಣ, ಮಧುಕುಮಾರ್, ವಿನುಕುಮಾರ್, ಲಿಖಿತ್, ನಿರಂಜನ್, ಗುಡ್ಡಳ್ಳಿ ಮಧುಕುಮಾರ್, ದೇವಾಲಯದ ಅರ್ಚಕ ಕೃಷ್ಣಮೂರ್ತಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.