ಕೂಡಿಗೆ, ಅ. ೪: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಕಸ್ತೂರಿರಂಗನ್ ವರದಿ ಕುರಿತು ವಿಶೇಷ ಗ್ರಾಮಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕಸ್ತೂರಿರಂಗನ್ ವರದಿ ಜಾರಿಯಾದರೆ ಉಂಟಾಗುವ ಬಾಧಕಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಕಸ್ತೂರಿರಂಗನ್ ವರದಿ ಜಾರಿಯನ್ನು ಒಕ್ಕೊರಲಿನಿಂದ ವಿರೋಧಿಸಿದರು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಲ್. ವಿಶ್ವ ಅವರು, ಕಸ್ತೂರಿರಂಗನ್ ವರದಿ ಜಾರಿಯಾದರೆ ಕಾಡಂಚಿನಲ್ಲಿರುವ ನಿವಾಸಿಗಳು, ಬೆಳೆಗಾರರು, ರೈತರು ತೀವ್ರ ಅನಾನುಕೂಲ ಎದುರಿಸಬೇಕಾಗುತ್ತದೆ. ಹೀಗಾಗಿ ಇದನ್ನು ಕೈಬಿಡಬೇಕು ಅಥವಾ ಮರುಪರಿಶೀಲಿಸಬೇಕಿದೆ. ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಅನುಷ್ಠಾನಗೊಳ್ಳುವ ಅಗತ್ಯವಿದೆ ಎಂದರು.
ಮಾಜಿ ಸದಸ್ಯ ಆರ್.ಕೆ. ಚಂದ್ರು ಮಾತನಾಡಿ, ಇದೊಂದು ರೀತಿಯಲ್ಲಿ ಮದ್ದಿಲ್ಲದ ಕ್ಯಾನ್ಸರ್ ರೀತಿಯ ಸಮಸ್ಯೆಯಾಗಿ ಪರಿಣಮಿಸಿದೆ. ಈ ವರದಿ ಅನುಷ್ಠಾನದಿಂದ ಅರಣ್ಯವನ್ನು ಅವಲಂಬಿಸಿರುವ ಮೂಲ ನಿವಾಸಿಗಳಿಗೆ ನೆಲೆಯಿಲ್ಲದಂತಾಗುತ್ತದೆ. ಎಲ್ಲರೂ ಈ ವರದಿಯನ್ನು ಅನಿವಾರ್ಯವಾಗಿ ವಿರೋಧಿಸುವ ಅಗತ್ಯವಿದೆ ಎಂದರು. ತಾ.ಪಂ. ಮಾಜಿ ಸದಸ್ಯ ವಿಜು ಚಂಗಪ್ಪ ಮಾತನಾಡಿದರು. ನೋಡಲ್ ಅಧಿಕಾರಿ ರಾಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಆಯಿಷ, ಕಾರ್ಯದರ್ಶಿ ಶೇಷಾಚಲ, ಗ್ರಾಮ ಲೆಕ್ಕಾಧಿಕಾರಿ ಸೋನು ಸೇರಿದಂತೆ ಮಾಜಿ ಜನಪ್ರತಿನಿಧಿಗಳು ಇದ್ದರು.