ಕೂಡಿಗೆ, ಅ. ೩: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಭಾರೀ ಗಾಳಿ ಮತ್ತು ಗುಡುಗು ಸಹಿತ ಮಳೆಯಿಂದಾಗಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಗ್ರಾಮಗಳಾದ ಕೂಡುಮಂಗಳೂರು, ಸುಂದರನಗರ, ಚಿಕ್ಕತ್ತೂರು, ದೊಡ್ಡತ್ತೂರು, ಬಸವತ್ತೂರಿನಲ್ಲಿ ೧೦ಕ್ಕೂ ಹೆಚ್ಚು ಮನೆಗಳ ಹಂಚುಗಳು, ಸಿಮೆಂಟ್ ಶೀಟ್ಗಳು ನೆಲಕ್ಕೆ ಬಿದ್ದ ಪರಿಣಾಮ ಭಾರಿ ನಷ್ಟ ಉಂಟಾಗಿದೆ.
ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಭಾರೀ ಗಾಳಿಯಿಂದಾಗಿ ೨೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ೫ ಗ್ರಾಮಗಳಲ್ಲಿ ಹತ್ತಾರು ಏಕರೆಗಳಷ್ಟು ಪ್ರದೇಶದ ಬಾಳೆ, ಮೆಕ್ಕೆಜೋಳದ ಬೆಳೆ ನೆಲಕಚ್ಚಿದೆ. ಜೊತೆಗೆ ಮನೆ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಅನೇಕ ವಾಹನಗಳ ಮೇಲೂ ಮರದ ಕೊಂಬೆಗಳು ಬಿದ್ದ ಪರಿಣಾಮ ಹಾನಿ ಉಂಟಾಗಿದೆ.
ಸಂಬAಧಿಸಿದ ಗ್ರಾಮ ಪಂಚಾಯಿತಿ, ಕೃಷಿ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ