ಸೋಮವಾರಪೇಟೆ, ಅ. ೩: ಹಿರಿಯರನ್ನು ಗೌರವಿಸಿ, ಅವರ ಕಷ್ಟಗಳಿಗೆ ನೆರವಾಗುವುದರಿಂದ ನಮ್ಮ ಭವಿಷ್ಯವೂ ಸುಖಮಯವಾಗುತ್ತದೆ ಎಂದು ಸಹಾಯಕ ಕಾನೂನು ನೆರವು ಅಭಿರಕ್ಷಕಿ ಹೆಚ್.ಆರ್. ಪವಿತ್ರ ಹೇಳಿದರು.

ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರಪೇಟೆಯ ಶ್ರೀ ಶಕ್ತಿ ಭವನದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯರನ್ನು ನಂಬಿ, ಅವರ ಸಲಹೆ-ಸೂಚನೆಗಳನ್ನು ಪಡೆಯುವ ಸಂಸ್ಕಾರವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು. ಹಿರಿಯರ ಒಡನಾಟದಿಂದ ಕಿರಿಯರು ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ ಎಂದರು.

ವಕೀಲ ಕೃಷ್ಣಕುಮಾರ್ ಡಿ.ಎ. ಅವರು ಹಿರಿಯ ನಾಗರಿಕರ ಕಾಯ್ದೆ, ಹಿರಿಯ ನಾಗರಿಕರ ಆಸ್ತಿ ಸಂರಕ್ಷಣೆ ಹಾಗೂ ಸರ್ಕಾರದಿಂದ ಹಿರಿಯರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು. ಡಾ. ಸೌಪರ್ಣಿಕಾ ಅವರು ಹಿರಿಯರು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವು ದರ ಜೊತೆಗೆ ಯೋಗ ಹಾಗೂ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಹಿರಿಯರಾದ ವಿದ್ವಾನ್ ಶಂಕರಯ್ಯ ಅವರು ಹಾಸ್ಯ ನಾಟಕ ಹಾಗೂ ನೃತ್ಯಗಳ ಮೂಲಕ ರಂಜಿಸಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಠಾಣಾಧಿಕಾರಿ ಖತೀಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀದೇವಿ ಮುಧೋಳ್, ವಿಶೇಷಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲಾ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಯು.ಟಿ. ಮಲ್ಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಹಿರಿಯ ನಾಗರಿಕರು ಇದ್ದರು.