ಮಡಿಕೇರಿ, ಅ. ೨: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕೊಡ್ಲಿಪೇಟೆ ಹೋಬಳಿಯ ಬ್ಯಾಡಗೊಟ್ಟದಲ್ಲಿ ಎಸ್‌ಐಆರ್ ಪ್ರಕ್ರಿಯೆಯಡಿ ನಮೂನೆ-೭ ಅನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕುವ ಪ್ರಯತ್ನ ನಡೆದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಒತ್ತಾಯಿಸಿದರು.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಯಾಡಗೊಟ್ಟ ಮತಗಟ್ಟೆಯ ೬೩ ಮತದಾರರನ್ನು ಗುರಿಯಾಗಿಸಿಕೊಂಡು ನಮೂನೆ-೭ರ ಮೂಲಕ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಈ ಅರ್ಜಿಗಳ ಹಿಂದೆ ದುರುದ್ದೇಶವಿದೆಯೇ ಎಂಬುದನ್ನು ತನಿಖೆ ಮೂಲಕ ಸ್ಪಷ್ಟಪಡಿಸಬೇಕಾಗಿದೆ ಎಂದು ಹೇಳಿದರು.

ನಮೂನೆ-೭ರ ಅರ್ಜಿಗಳನ್ನು ಒಬ್ಬರೇ ವ್ಯಕ್ತಿ ಭರ್ತಿ ಮಾಡಿ ಸಹಿ ಮಾಡಿರುವುದು ಕಂಡುಬAದಿದ್ದು, ಸುಳ್ಳು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಮಾಹಿತಿ ಅಥವಾ ದಾಖಲೆಗಳನ್ನು ಆಧರಿಸಿ ಅರ್ಜಿ ಸಲ್ಲಿಸಿದ್ದರೆ ಸಂಬAಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಇಂತಹ ಪ್ರಕರಣಗಳು ಜಿಲ್ಲೆಯ ಇತರ ಭಾಗಗಳಲ್ಲಿಯೂ ನಡೆದಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಮತದಾನವು ಪ್ರಜಾಪ್ರಭುತ್ವದ ಪ್ರಮುಖ ಹಕ್ಕಾಗಿದ್ದು, ಅರ್ಹ ಮತದಾರರ ಹೆಸರನ್ನು ಅನಧಿಕೃತವಾಗಿ ಪಟ್ಟಿಯಿಂದ ಕೈಬಿಡುವ ಯಾವುದೇ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಬೇಕು. ಬೂತ್‌ಮಟ್ಟದ ಅಧಿಕಾರಿಗಳು ಇಂತಹ ಅರ್ಜಿಗಳ ಕುರಿತು ಹೆಚ್ಚಿನ ನಿಗಾವಹಿಸಿ, ಅರ್ಜಿಯಲ್ಲಿರುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಸುಳ್ಳು ದಾಖಲೆ ಅಥವಾ ಸುಳ್ಳು ಘೋಷಣೆ ನೀಡಿ ಅರ್ಜಿ ಸಲ್ಲಿಸಿರುವುದು ಸಾಬೀತಾದರೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು. ಚುನಾವಣಾಧಿಕಾರಿಗಳ ಮೇಲೆ ನಮಗೆ ವಿಶ್ವಾಸವಿದ್ದು, ಅರ್ಹ ಪ್ರತಿಯೊಬ್ಬ ಮತದಾರನಿಗೂ ತನ್ನ ಮತದಾನದ ಹಕ್ಕು ಚಲಾಯಿಸುವ ಅವಕಾಶ ಖಾತ್ರಿಯಾಗಬೇಕು ಎಂದರು.

ಇದು ಕೇವಲ ಮತಗಳ ಲೆಕ್ಕಾಚಾರದ ವಿಚಾರವಲ್ಲ; ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯ ಪ್ರಶ್ನೆಯಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯ. ಘಟನೆ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಯೊಂದಿಗೂ ಚರ್ಚಿಸಲಾಗಿದೆ ಎಂದು ಡಾ. ಮಂತರ್ ಗೌಡ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಮೂನೆ-೭ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ೨೧ನೇ ವಾರ್ಡ್ನಲ್ಲಿ ೬೩ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರು ನಮೂನೆ-೭ರ ಮೂಲಕ ಅರ್ಜಿ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಮತದಾರರು ಬ್ಯಾಡಗೊಟ್ಟದ ಖಾಯಂ ನಿವಾಸಿಗಳಾಗಿದ್ದು, ಅವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಅರ್ಜಿ ಸಲ್ಲಿಸಿರುವುದು ಗಂಭೀರ ವಿಚಾರವಾಗಿದೆ ಎಂದು ಹೇಳಿದರು.

ಇಂತಹ ಘಟನೆಗಳು ಜಿಲ್ಲಾದ್ಯಂತ ಇತರ ಮತಗಟ್ಟೆಗಳಲ್ಲಿಯೂ ನಡೆದಿರುವ ಸಾಧ್ಯತೆಯ ಬಗ್ಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗುವುದು. ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡ ಇದೆಯೇ ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.

ಬ್ಯಾಡಗೊಟ್ಟದಲ್ಲಿ ನಡೆದಿರುವ ಘಟನೆ ನಿರ್ದಿಷ್ಟ ಮತಗಟ್ಟೆಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಜಿಲ್ಲೆಯ ಇತರ ಭಾಗಗಳಲ್ಲಿಯೂ ಇಂತಹ ಅರ್ಜಿಗಳು ಸಲ್ಲಿಕೆಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಕೊಡಗು ಜಿಲ್ಲೆಯ ಎಲ್ಲಾ ೫೪೪ ಮತಗಟ್ಟೆಗಳಲ್ಲಿಯೂ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಧರ್ಮಜ ಉತ್ತಪ್ಪ ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಕಾಂತರಾಜು, ಮುನೀರ್ ಅಹ್ಮಮದ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಎಸ್‌ಐಆರ್ ಪ್ರಕ್ರಿಯೆ ಜಿಲ್ಲಾ ಸಂಚಾಲಕ ತೆನ್ನಿರ ಮೈನಾ, ಜನಾರ್ಧನ್ ಹಾಜರಿದ್ದರು.