ಸಿದ್ದಾಪುರ, ಅ. ೨: ಹೊರದೇಶ ಹಾಗೂ ಹೊರರಾಜ್ಯಗಳಿಂದ ಕೊಡಗು ಜಿಲ್ಲೆಗೆ ಕಾರ್ಮಿಕರಾಗಿ ಬರುವವರ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಿ, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ ತೋಟದ ಮಾಲೀಕರಿಗೆ ಸಲಹೆ ನೀಡಿದರು.
ಕೊಡಗು ಸುರಕ್ಷಾ ಆಂದೋಲನ ಸಮಿತಿ ವತಿಯಿಂದ ಸಿದ್ದಾಪುರದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೊರದೇಶ ಹಾಗೂ ಹೊರರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಅವರ ದಾಖಲೆಗಳನ್ನು ಪರಿಶೀಲಿಸಿ, ಸ್ಥಳೀಯ ಪೊಲೀಸ್ ಠಾಣೆಗಳಿಗೆ ನೀಡುವ ಮೂಲಕ ಸೂಕ್ತ ದಾಖಲಾತಿ ಇಟ್ಟುಕೊಳ್ಳಬೇಕು ಎಂದರು.
ಕಾರ್ಮಿಕರ ಕೊರತೆಯಿದೆ ಎಂಬ ಕಾರಣಕ್ಕೆ ಸಮರ್ಪಕ ಮಾಹಿತಿ ಹಾಗೂ ದಾಖಲೆಗಳಿಲ್ಲದ ವ್ಯಕ್ತಿಗಳನ್ನು ತೋಟಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಬಾರದು. ಪೂರ್ವಿಕರು ನಿರ್ಮಿಸಿ ಉಳಿಸಿರುವ ಆಸ್ತಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಬಾಂಗ್ಲಾದೇಶ ಸೇರಿದಂತೆ ವಿದೇಶಗಳಿಂದ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸುವವರಿಂದ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಸೇರಿದಂತೆ ದಾಖಲೆಗಳನ್ನು ಪಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಕ್ರಮಗಳನ್ನು ವಿರೋಧಿಸುತ್ತಿವೆ ಎಂದು ಅವರು ಆರೋಪಿಸಿದರು.
ಮಾಲ್ದಾರೆ-ಸಿದ್ದಾಪುರ ಮಾರ್ಗವಾಗಿ ಜಾಥಾ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಜಾಥಾವನ್ನು ಸ್ವಾಗತಿಸಿ ಬರಮಾಡಿಕೊಂಡರು.