ಚೆಯ್ಯಂಡಾಣೆ, ಅ. ೨: ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಹಣ್ಣು ಹಾಗೂ ತರಕಾರಿ ವಸ್ತು ಪ್ರದರ್ಶನದಲ್ಲಿ ನರಿಯಂದಡ ಗ್ರಾಮದ ಮಕ್ಕಿಮನೆ ಮೈತ್ರೆಯಿ ಪಾಲ್ಗೊಂಡು ಮೆಚ್ಚುಗೆಗೆ ಪಾತ್ರರಾದರು.

ತಮ್ಮ ತೋಟದಲ್ಲಿ ಬೆಳೆದ ವಿವಿಧ ವಿದೇಶಿ ಹಣ್ಣುಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿದ ಮೈತ್ರೆಯಿ, ಭಾರತೀಯ ತೋಟಗಾರಿಕಾ ಇಲಾಖೆಯ ಅಖಿಲ ಭಾರತ ಮಟ್ಟದ ನಿರ್ದೇಶಕರು ಹಾಗೂ ಹಿರಿಯ ವಿಜ್ಞಾನಿಗಳಿಗೆ ತಮ್ಮ ತೋಟದಲ್ಲಿ ಬೆಳೆಯಲಾಗುತ್ತಿರುವ ಹಣ್ಣುಗಳು ಮತ್ತು ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಬಳಿಕ ರಾಜ್ಯಪಾಲರು ಮೈತ್ರೆಯಿಯವರ ಹಣ್ಣುಗಳ ಪ್ರದರ್ಶನವನ್ನು ವೀಕ್ಷಿಸಿ, ಅವರ ಕುಟುಂಬದ ಕೃಷಿ ಆಸಕ್ತಿಗೆ ಶ್ಲಾಘನೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮೈತ್ರೆಯಿಯವರ ಕುಟುಂಬಕ್ಕೆ ವಿಶಿಷ್ಟ ಬೆಳೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮೈತ್ರೆಯಿ ನಿವಾಸಕ್ಕೆ ಹಿರಿಯ ವಿಜ್ಞಾನಿಗಳ ಭೇಟಿ

ವಸ್ತು ಪ್ರದರ್ಶನದಲ್ಲಿ ಮೈತ್ರೆಯಿಯವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಭಾರತೀಯ ತೋಟಗಾರಿಕಾ ಇಲಾಖೆಯ ಬೆಂಗಳೂರು ನಿರ್ದೇಶಕ ಟಿ.ಕೆ ಬೆಹೇರಾ, ಬೆಂಗಳೂರು ತೋಟಗಾರಿಕಾ ಇಲಾಖೆಯ ಹಿರಿಯ ವಿಜ್ಞಾನಿ ಕರುಣಾಕರನ್ ಹಾಗೂ ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಮುರಳೀಧರ ಅವರು ಚೆಯ್ಯಂಡಾಣೆಯಲ್ಲಿರುವ ಮೈತ್ರೆಯಿಯವರ ನಿವಾಸಕ್ಕೆ ಭೇಟಿ ನೀಡಿದರು.

ತೋಟದಲ್ಲಿ ಬೆಳೆದಿರುವ ವಿವಿಧ ವಿದೇಶಿ ಹಣ್ಣುಗಳನ್ನು ವೀಕ್ಷಿಸಿದ ವಿಜ್ಞಾನಿಗಳು ಮೈತ್ರೆಯಿಯವರ ಕೃಷಿ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈತ್ರೆಯಿ ಅವರು ಪ್ರಗತಿಪರ ಕೃಷಿಕ ಮಕ್ಕಿಮನೆ ಸುಧೀರ್ ಹಾಗೂ ವಿಜಯಲಕ್ಷಿö್ಮ ದಂಪತಿಯ ಪುತ್ರಿಯಾಗಿದ್ದು, ಪ್ರಸ್ತುತ ಎಂಬಿಎ ವಿದ್ಯಾಭ್ಯಾಸ ಮುಗಿಸಿದ್ದಾರೆ.

-ಅಶ್ರಫ್