ಕಡಂಗ, ಅ. ೧ : ಅರಪಟ್ಟು ಪೈಸಾರಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಯುಷ್ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೀಲಾ ಅಶೋಕ್, ಮಹಿಳೆಯರು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟುವ ಉದ್ದೇಶದಿಂದ ಪೋಷಣ್ ಅಭಿಯಾನ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರ ಮಾಹಿತಿಯನ್ನು ಪೋಷಣ್ ಟ್ರಾö್ಯಕರ್‌ನಲ್ಲಿ ದಾಖಲಿಸಿ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಮಹತ್ವದ ಕುರಿತು ಅರಿವು ಮೂಡಿಸುವುದು ಸೀಮಂತ ಕಾರ್ಯಕ್ರಮದ ಉದ್ದೇಶವಾಗಿದ್ದು, ಇದರಿಂದ ಆರೋಗ್ಯವಂತ ಮಗುವಿನ ಜನನಕ್ಕೆ ಸಹಕಾರಿಯಾಗಲಿದೆ ಎಂದರು.

ಆರೋಗ್ಯ ಇಲಾಖೆಯ ಅಧಿಕಾರಿಗಳು ಪೌಷ್ಟಿಕ ಆಹಾರ ತಯಾರಿಸುವ ವಿಧಾನ ಹಾಗೂ ಅದರ ಮಹತ್ವದ ಕುರಿತು ಮಾಹಿತಿ ನೀಡಿದರು.

ಅರಪಟ್ಟು ಆಯುಷ್ ಆಸ್ಪತ್ರೆಯ ವೈದ್ಯೆ ಡಾ. ಶುಭ ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ಜೀವನವೂ ಉತ್ತಮವಾಗಿರುತ್ತದೆ. ಸ್ಥಳೀಯವಾಗಿ ಬೆಳೆಯುವ ಹಣ್ಣು, ಸೊಪ್ಪು ಹಾಗೂ ತರಕಾರಿಗಳನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಜಶೀಲಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ ಹಾಗೂ ಸೌಮ್ಯ, ಸಹಾಯಕಿಯರು, ಮಕ್ಕಳ ತಾಯಂದಿರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಕವಿತಾ ಸ್ವಾಗತಿಸಿ, ವಂದಿಸಿದರು.